ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಳವಾಗಿದೆ. ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳ ಮೇಲೆ ಪುಂಡಾಟಿಕೆ ನಡೆಸಿದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಬೆಳಗಾವಿ–ಮಹಾರಾಷ್ಟ್ರ ನಡುವಣ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
MES ಮಹಾಮೇಳಾವ್‌ಗೆ ಅನುಮತಿ ನಿರಾಕರಣೆ – ಶಿವಸೇನೆ ಕೋಪ
ಬೆಳಗಾವಿಯಲ್ಲಿ ಎಂಇಎಸ್ ಮುಖಂಡರು ಮಹಾಮೇಳಾವ್ ನಡೆಸಲು ಮುಂದಾಗಿದ್ದರು. ಆದರೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ ನಂತರ ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರು ಸಿಟ್ಟಿನಿಂದ ಕೊಲ್ಲಾಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ‘ಜೈ ಮಹಾರಾಷ್ಟ್ರ’ ಸ್ಟಿಕ್ಕರ್ ಅಂಟಿಸಿ ಪ್ರತಿಭಟನೆ ನಡೆಸಿದರು.
ಇದೆ ವೇಳೆ ಮಹಾರಾಷ್ಟ್ರದ ಕೆಲವು ನಾಯಕರೂ ಬೆಳಗಾವಿ ಜಿಲ್ಲೆಗೆ ಪ್ರವೇಶಿಸಲು ಯತ್ನಿಸುತ್ತಿರುವ ಮಾಹಿತಿ ಲಭ್ಯವಾಗಿದೆ.
ಗಡಿಯಲ್ಲಿ ಪೊಲೀಸ್ ಕಟ್ಟೆಚ್ಚರ
ಘಟನೆಯ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಬಳಿ ಕರ್ನಾಟಕ–ಮಹಾರಾಷ್ಟ್ರ ಗಡಿಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮುಂಬರುವ ಉದ್ವಿಗ್ನತೆಯನ್ನು ಗಮನಿಸಿ ಪೊಲೀಸರು ಸಾರಿಗೆ ಸಂಸ್ಥೆಗೆ ಮುನ್ನೆಚ್ಚರಿಕೆ ಸೂಚನೆ ನೀಡಿದ್ದರಿಂದ KSRTC ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಬೆಳಗಾವಿಯಿಂದ ಕೊಲ್ಲಾಪುರಕ್ಕೆ ತೆರಳುತ್ತಿದ್ದ ಬಸ್‌ಗಳು ನಿಪ್ಪಾಣಿಯವರೆಗೆ ಮಾತ್ರ ಸಂಚಾರ ನಡೆಸಿ ವಾಪಸಾಗುತ್ತಿವೆ.
ಬೆಳಗಾವಿಯಲ್ಲಿ MES ಮುಖಂಡರ ಬಂಧನ
ಬೆಳಗಾವಿಯಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಆರೋಪದ ಮೇರೆಗೆ ಎಂಇಎಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ಮತ್ತೆ ಪುಂಡಾಟಿಕೆ ನಡೆಸಲು ಮುಂದಾಗಿದ್ದು ಗಡಿಭಾಗದಲ್ಲಿ ಅಶಾಂತಿ ಹೆಚ್ಚಿಸುವ ಯತ್ನ ನಡೆಯುತ್ತಿದೆ.
ಕೊಲ್ಲಾಪುರದಲ್ಲಿ ಶಿವಸೇನೆ ದುಸ್ಸಾಹಸ
ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ರಸ್ತೆಗಿಳಿದು ಕರ್ನಾಟಕ ಸಾರಿಗೆ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.ಕೊಲ್ಲಾಪುರ ಸೆಂಟ್ರಲ್ ಬಸ್‌ಸ್ಟ್ಯಾಂಡ್‌ನಲ್ಲಿಯೂ ಶಿವಸೇನೆ ಕಾರ್ಯಕರ್ತರ ಉದ್ಧಟತನ ಮುಂದುವರಿದಿದ್ದು, ಠಾಕ್ರೆ ಬಣದ ಜಿಲ್ಲಾ ಅಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.

