ಬಳ್ಳಾರಿ, ಜನವರಿ 04: ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆ ವೇಳೆ ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಶಾಸಕ ಜನಾರ್ದನ ರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವಿನ ಮಾರಾಮಾರಿಯಲ್ಲಿ ನಡೆದ ಫೈರಿಂಗ್‌ಗೆ ಸತೀಶ್ ರೆಡ್ಡಿಯ ಖಾಸಗಿ ಗನ್‌ಮ್ಯಾನ್ ಬಳಸಿದ್ದ 12 ಎಂಎಂ ಬುಲೆಟ್ ಕಾರಣವೆಂಬುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜಶೇಖರ್ ಮೃತಪಟ್ಟಿದ್ದಕ್ಕೆ ಕಾರಣವಾದ ಬುಲೆಟ್, ಸತೀಶ್ ರೆಡ್ಡಿಯ ಗನ್‌ಮ್ಯಾನ್ ಬಳಸಿದ್ದ ಅದೇ ಬಂದೂಕಿನಿಂದ ಹೊರಬಂದಿರುವುದು ತನಿಖೆಯಲ್ಲಿ ದೃಢವಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರೂಸ್‌ಪೇಟೆ ಪೊಲೀಸರು ಈಗಾಗಲೇ ಐದು ಗನ್‌ಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ಒಬ್ಬ ಗನ್‌ಮ್ಯಾನ್‌ನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ.
ಗಲಾಟೆ ಪ್ರಕರಣ ಸಂಬಂಧ ಎರಡೂ ಗುಂಪುಗಳ ವಿರುದ್ಧವೂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದುವರೆಗೆ 50ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇಂದು ಮಧ್ಯಾಹ್ನದೊಳಗೆ ಪ್ರಮುಖ ಆರೋಪಿಗಳ ಸಹಿತ ಹಲವರ ಬಂಧನ ಸಾಧ್ಯತೆ ಇದೆ. ಗಲಾಟೆ ನಡೆದ ಸಂದರ್ಭ ಸ್ಥಳದಲ್ಲಿದ್ದ ಶಾಸಕ ಭರತ್ ರೆಡ್ಡಿಯ ಆಪ್ತ ಸತೀಶ್ ರೆಡ್ಡಿಯ ಬಂಧನವೂ ಸಾಧ್ಯತೆ ಎನ್ನಲಾಗಿದೆ.
ಪೊಲೀಸ್ ತನಿಖೆಯ ಪ್ರಕಾರ, ಸತೀಶ್ ರೆಡ್ಡಿ ಸ್ಥಳಕ್ಕೆ ಬಂದ ಬಳಿಕವೇ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಜನಾರ್ದನ ರೆಡ್ಡಿ ಬೆಂಬಲಿಗರು ಸತೀಶ್ ರೆಡ್ಡಿ ಮೇಲೆ ಹಲ್ಲೆಗೆ ಮುಂದಾಗಿದ್ದು, ಪ್ರತಿಯಾಗಿ ಸತೀಶ್ ರೆಡ್ಡಿಯ ಖಾಸಗಿ ಗನ್‌ಮ್ಯಾನ್‌ಗಳು ಫೈರಿಂಗ್ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಗಲಾಟೆಗೆ ಸಂಬಂಧಿಸಿದಂತೆ ಒಟ್ಟು ಆರು ಪ್ರಕರಣಗಳು ಇದುವರೆಗೆ ದಾಖಲಾಗಿವೆ.
ಇದೇ ವೇಳೆ, ಬಳ್ಳಾರಿ ಗಲಾಟೆ ಹಿನ್ನೆಲೆ ತಮ್ಮ ಹಾಗೂ ಕುಟುಂಬದ ಭದ್ರತೆ ಕುರಿತು ಆತಂಕ ವ್ಯಕ್ತಪಡಿಸಿರುವ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಝೆಡ್ ಶ್ರೇಣಿಯ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಡಿಜಿಪಿ ಡಾ. ಎಂ.ಎ. ಸಲೀಂ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿಯನ್ನು ಬಂಧಿಸಬೇಕು, ಘಟನೆಯನ್ನು ಸಮರ್ಪಕವಾಗಿ ನಿಭಾಯಿಸದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಗತ್ಯ ಭದ್ರತೆ ಒದಗಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಅಥವಾ ತಮ್ಮ ಕುಟುಂಬದ ಮೇಲೆ ದಾಳಿ ನಡೆದರೆ ಅದರ ಹೊಣೆ ರಾಜ್ಯ ಸರ್ಕಾರದ್ದೇ ಎಂದು ಜನಾರ್ದನ ರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜನಾರ್ಧನ ರೆಡ್ಡಿ ಸೇರಿದಂತೆ ನಾಲ್ವರ ವಿರುದ್ಧ ಸುಮೋಟೋ ಪ್ರಕರಣ
ಕಳೆದ ಎರಡು ದಿನಗಳ ಹಿಂದೆ ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಪಟ್ಟಂತೆ ಗಲಾಟೆ ನಡೆದು ಫೈರಿಂಗ್ ಆಗಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಈ ಒಂದು ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ ಸೇರಿದಂತೆ ನಾಲ್ವರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.
ಹೌದು ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿದ್ದ ಈ ವಿಚಾರವಾಗಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ A1 ಜನಾರ್ಧನರೆಡ್ಡಿ, A2, ಶ್ರೀರಾಮಲು A3 ಸೋಮಶೇಖರ್ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಸತೀಶ್ ರೆಡ್ಡಿ A4 ಆರೋಪಿ ಎಂದು ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಪೋಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದು ಡಿವೈಎಸ್ಪಿ ಚಂದ್ರಕಾಂತ ದೂರಿನ ಮೇರೆಗೆ ರೆಡ್ಡಿ ವಿರುದ್ಧ ಸೋಮೊಟೊ ಕೇಸ್ ದಾಖಲಾಗಿದೆ.

