ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಆಗಿ ಅಂತ್ಯ ಹಾಡಿದೆ. ಈ ಬಾರಿಯ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರು ಆಗುತ್ತಾರೆ ವೀಕ್ಷಕರಲ್ಲಿ ಭಾರೀ ಕುತೂಹಲ ಮನೆ ಮಾಡಿತ್ತು. ಅದರಲ್ಲೂ ಫೈನಲ್‌ನಲ್ಲಿ ಹನುಮಂತ ಗೆಲ್ಲುತ್ತಾರಾ ಅಥವಾ ತ್ರಿವಿಕ್ರಮ್ ಗೆಲ್ಲುತ್ತಾರಾ ಅಂತ ಗೊಂದಲ ಮನೆ ಮಾಡಿತ್ತು.
ಕೊನೆಗೆ ಬಿಗ್ಬಾಸ್ ಸೀಸನ್ ಲೇಟಾಗಿ ಬಂದರೂ ಲೇಟೇಸ್ಟ್ ಆಗಿಯೇ ಟ್ರೋಫಿ ಗೆದ್ದುಕೊಂಡಿದ್ದಾರೆ ಹಳ್ಳಿ ಹೈದ ಹನುಮಂತ. ಒಬ್ಬ ಕುರಿಗಾಯಿ ಹನುಮಂತ ಕನ್ನಡಿಗರ ಹೃದಯ ಗೆದ್ದು, ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11ಕ್ಕೆ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗಮನ ಸೆಳೆದರು. ಅವರ ಆಟ ಎಲ್ಲರಿಗೂ ಇಷ್ಟ ಆಯಿತು. ಚಾಣಾಕ್ಷತನದಿಂದ ಅವರು ಆಟ ಆಡಿ ಭೇಷ್ ಎನಿಸಿಕೊಂಡರು. ಫಿನಾಲೆ ಟಿಕೆಟ್ ಪಡೆದ ಮೊದಲ ಸ್ಪರ್ಧಿ ಇವರಾಗಿದ್ದರು. ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ಎಂಬ ಮಾತಿನಂತೆ ಈ ಬಾರಿಯ ಬಿಗ್ಬಾಸ್ ವಿನ್ನರ್ ಆಗಿ ಹನುಮಂತ ಟ್ರೋಫಿ ಎತ್ತಿದ್ದಾರೆ.
ಗೆಲುವಿಗೆ ಹನುಮಂತು ಪ್ರತಿಕ್ರಿಯೆ :
ಕೊನೆಯ ಕ್ಷಣದಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ ವಿನ್ನರ್ ಯಾರು ಎಂದು ಜೋರಾಗಿ ಹನುಮಂತನ ಹೆಸರನ್ನು ಕೂಗಿದ್ದಾರೆ. ಆಗ ವೇದಿಕೆ ಮೇಲೆ ಹನುಮಂತ ಗಾಬರಿಯಾಗಿದ್ದಾರೆ. ಆ ಕೂಡಲೇ ಕಿಚ್ಚ ಸುದೀಪ್ ಅವರ ಕಾಲಿಗೆ ಬಿದ್ದುಬಿಟ್ಟಿದ್ದಾರೆ. ಇದಾದ ಬಳಿಕ ಕಿಚ್ಚ ಸುದೀಪನ ಮುಂದೆ ಮಾತಾಡಿದ ಹನುಮಂತ, ನಾನು ಗೆಲ್ಲುತ್ತೇನೆ ಅಂತ ಅಂದುಕೊಂಡಿದ್ದರೇ ಸ್ವಲ್ಪ ಬಾಯಿಪಾಠ (ಕಂಠಪಾಠ) ಮಾಡಿಕೊಂಡು ಬರ್ತಾ ಇದ್ದೇ. ಗೆದ್ದಿರೋ ಖುಷಿಗೆ ಏನ್ ಮಾತಾಡಬೇಕು ಅಂತ ಗೊತ್ತಾಗುತ್ತಿಲ್ಲ. ದೇವರ ಆಣೆಗೂ ನಾನು ಗೆಲ್ತೀನಿ ಅಂತ ಅಂದುಕೊಂಡು ಬಂದಿಲ್ಲ ಸರ್. ಏನೋ ಕರೆದಿದ್ದಾರೆ, ಹೋಗಿ ಮಜಾ ಮಾಡಿ ಬರೋಣ ಅಂತ ಇಲ್ಲಿಗೆ ಬಂದಿದ್ದೇನೆ. ದೇವರ, ಸುದೀಪ್ ಸರ್, ಇಡೀ ಕರ್ನಾಟಕದ ಜನತೆಯ ಆರ್ಶೀವಾದದಿಂದ ಗೆದ್ದಿದ್ದೇನೆ ಅಂತ ಹೇಳಿದ್ದಾರೆ.

ವಿನ್ನಿಂಗ್ ಅಮೌಂಟ್ ಎಷ್ಟು..?
ಹನುಮಂತು ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಆದರೆ 50 ಲಕ್ಷಕ್ಕೆ 50 ಲಕ್ಷ ವಿನ್ನರ್ ಕೈ ಸೇರೋದಿಲ್ಲ. ಸರ್ಕಾರ ದೊಡ್ಡ ಮೊತ್ತದ ತೆರಿಗೆಯನ್ನು ವಿಧಿಸುತ್ತದೆ. 50 ಲಕ್ಷದಲ್ಲಿ ತೆರಿಗೆ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.
ಬಹುಮಾನ ಮೊತ್ತಗಳಿಗೆ ಸರ್ಕಾರ 30% ಟ್ಯಾಕ್ಸ್ ವಿಧಿಸುತ್ತದೆ. ಬರುವ ಅಷ್ಟೂ ಹಣದಲ್ಲಿ 30% ಹಣ ಸರ್ಕಾರಕ್ಕೆ ಕೊಡಬೇಕು. ಈ ತೆರಿಗೆ ಹನುಮಂತು ಕಟ್ಟಲ್ಲ, ಬದಲಾಗಿ ಆಯೋಜಕರೇ ಟ್ಯಾಕ್ಸ್ ಡಿಡಕ್ಟ್ ಮಾಡಿ ಉಳಿದ ಮೊತ್ತು ವಿನ್ನರ್ಗೆ ಕೊಡ್ತಾರೆ. ಹೀಗಾಗಿ ಹನುಮಂತಗೆ ಸಿಗೋದು 35 ಲಕ್ಷ. ಆದರೂ ಇದು ಒಳ್ಳೆಯ ಮೊತ್ತವೇ.
ಕೇವಲ ಹನುಮಂತ ಮಾತ್ರವಲ್ಲ, ಬಿಗ್ ಬಾಸ್ ರನ್ನರ್ ಅಪ್ ಗೆದ್ದವರು, ಬಹುಮಾನ ಮೊತ್ತ ಯಾರೆಲ್ಲ ಪಡೆಯುತ್ತಾರೋ, ಎಲ್ಲರೂ ತೆರಿಗೆ ಪಾವತಿಸಬೇಕು. ಬಿಗ್ ಬಾಸ್ 11ನೇ ಆವೃತ್ತಿಯಲ್ಲಿ ಹನುಮಂತ ವಿನ್ನರ್ ಆಗಿ ಟ್ರೋಫಿ ಗೆದ್ದರೆ, ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಬಿಗ್ ಬಾಸ್ ರನ್ನರ್ ಅಪ್ ಸ್ಪರ್ಧಿಗೆ 15 ಲಕ್ಷ ರೂಪಾಯಿ ಬಹುಮಾನ ಮೊತ್ತ ನೀಡಲಾಗಿದೆ. ತ್ರಿವಿಕ್ರಮ್ ಕೂಡ ಶೇಕಡಾ 30 ರಷ್ಟು ತೆರಿಗೆ ಪಾವತಿಸಬೇಕು. ಹೀಗಾಗಿ 15 ಲಕ್ಷ ರೂಪಾಯಿ ಬಹುಮಾನ ಮೊತ್ತದಲ್ಲಿ ತ್ರಿವಿಕ್ರಮ್ 4.5 ಲಕ್ಷ ರೂಪಾಯಿ ತೆರಿಗೆ ರೂಪದಲ್ಲಿ ನೀಡಬೇಕು. ಹೀಗಾಗಿ ತ್ರಿವಿಕ್ರಮ್ ಕೈಗೆ ಸಿಗುವ ಮೊತ್ತ 10.5 ಲಕ್ಷ ರೂಪಾಯಿ ಮಾತ್ರ.


