Bihar Elections : ಬಿಹಾರದಲ್ಲಿ ಇಂದು ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈ ವೇಳೆ ಲಖಿಸರೈನಲ್ಲಿ ಬಿಹಾರದ ಉಪಮುಖ್ಯಮಂತ್ರಿ ಮತ್ತು ಲಖಿಸರೈನ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಸಿನ್ಹಾ ಅವರ ವಾಹನವನ್ನು ಸುತ್ತುವರೆದ ಆರ್‌ಜೆಡಿ ಬೆಂಬಲಿಗರು ಅವರ ಕಾರಿನ ಮೇಲೆ ಚಪ್ಪಲಿ ಎಸೆದು, ಕಲ್ಲು ಮತ್ತು ಸಗಣಿ ಎಸೆದು ಗಲಾಟೆ ಮಾಡಿದ್ದಾರೆ. ಕಾರಿನ ಎದುರು ನಿಂತು “ಮುರ್ದಾಬಾದ್” ಘೋಷಣೆಗಳನ್ನು ಕೂಗಿದ್ದಾರೆ.
ಲಖಿಸರಾಯ್ ಕ್ಷೇತ್ರದಿಂದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಿನ್ಹಾ, ಖೋರಿಯಾರಿ ಗ್ರಾಮಕ್ಕೆ ಭೇಟಿ ನೀಡದಂತೆ ತಡೆಯಲು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬೆಂಬಲಿಗರು ಈ ದಾಳಿಯನ್ನು ಆಯೋಜಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಯನ್ನು ಖಂಡಿಸಿದ ಬಿಜೆಪಿ, ರಾಜಕೀಯ ಪ್ರತಿಸ್ಪರ್ಧಿಗಳನ್ನು ಬೆದರಿಸಲು ಆರ್‌ಜೆಡಿ ಹಿಂಸಾಚಾರಕ್ಕೆ ಇಳಿದಿದೆ ಎಂದು ಆರೋಪಿಸಿತು. ಹಲ್ಲೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೂಮಿಹಾರ್ ನಾಯಕ ಮತ್ತು ಮೂರು ಬಾರಿ ಶಾಸಕರಾಗಿರುವ ವಿಜಯ್ ಕುಮಾರ್ ಸಿನ್ಹಾ ಈ ಬಾರಿಯೂ ತಮ್ಮ ತವರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿರುವುದರಿಂದ ಇಂದು ಅವರು ಮತಗಟ್ಟೆಗಳಿಗೆ ಭೇಟಿ ನೀಡುತ್ತಿದ್ದರು. ಆಗ ಈ ದಾಳಿ ನಡೆದಿದೆ.

