ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇಂದು ಅತಿ ದೊಡ್ಡ ಬೆಳವಣಿಗೆ ಆಗಿದ್ದು, ಮಾಜಿ ಸಚಿವ, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ. ಆ ಮೂಲಕ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೋದು ಖಚಿತವಾಗಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಯೋಗೇಶ್ವರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಂಗಳವಾರ ತಡರಾತ್ರಿ ಎರಡು ಸಲ ಮನೆಯಿಂದ ರಹಸ್ಯ ಸ್ಥಳಕ್ಕೆ ಹೋಗಿ ಯೋಗೀಶ್ವರ್ ಚರ್ಚಿಸಿದ್ದರು. ಮಧ್ಯರಾತ್ರಿ ಖಾಸಗಿ ಹೊಟೇಲಿನಲ್ಲಿ ಡಿಕೆಶಿಯನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭೇಟಿ ವೇಳೆ ಇಂದು ಬೆಳಗ್ಗೆ ಸಿಎಂ ನಿವಾಸದಲ್ಲಿ ಪಕ್ಷ ಸೇರ್ಪಡೆಗೆ ಸಿಪಿವೈಗೆ ಡಿಕೆಶಿ ತಿಳಿಸಿದ್ದರು. ಅದರಂತೆ ಇಂದು ಬೆಳಗ್ಗೆಯೇ ಡಿಕೆಶಿ ನಿವಾಸಕ್ಕೆ ಯೋಗೀಶ್ವರ್ ತೆರಳಿದ್ದರು. ಸಿಪಿ ಯೋಗೇಶ್ವರ್ ಅವರನ್ನು ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡಿಸಲು ಬಿಜೆಪಿ ಮುಂದಾಗಿತ್ತು. ಬಿಜೆಪಿ ರಾಷ್ಟ್ರೀಯ ನಾಯಕರ ಮೂಲಕ ಯೋಗೇಶ್ವರ್ ಮನವೊಲಿಕೆಗೆ ಜೆಡಿಎಸ್ ಸಹ ಕಸರತ್ತು ನಡೆಸಿತ್ತು.
ಚನ್ನಪಟ್ಟಣ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಯೆ ಎಲ್ಲಾ ಪಕ್ಷಗಳಿಗೂ ಕಗ್ಗಂಟಾಗಿ ಪರಿಣಮಿಸಿತ್ತು.ಇದೀಗ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ ಎನ್ನಲಾಗಿದೆ.
ಡಿಕೆಶಿ ಹೇಳಿದ್ದೇನು..?
ಮಾಜಿ ಸಚಿವ ಸಿಪಿ ಯೋಗೇಶ್ವರ್ ಉತ್ತಮ ನಿರ್ಮಾಪಕ ಹಾಗೂ ನಟ. ಆದರೆ, ನಾವು ಯಾರಿಗೂ ಪ್ರೊಡಕ್ಷನ್ಸ್, ಡೈರಕ್ಷನ್ ಮಾಡುವುದಿಲ್ಲ. ಚನ್ನಪಟ್ಟಣ ಅಭಿವೃದ್ಧಿಯೇ ನಮ್ಮ ಗುರಿ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ಪಕ್ಷದ ನಾಯಕರ ಮೇಲೆ ವಿಶ್ವಾಸ ಇಟ್ಟು ಸ್ವ ಇಚ್ಚೆಯಿಂದ ಯೋಗೇಶ್ವರ್ ಕಾಂಗ್ರೆಸ್ ಗೆ ಸೇರ್ಪಡೆ ಆಗಿದ್ದಾರೆ. ಅವರಿಗೆ ಚನ್ನಪಟ್ಟಣದಲ್ಲಿ ಅಭ್ಯರ್ಥಿಯಾಗಿ ಟಿಕೆಟ್ ಕೊಡುವವರು ಎಐಸಿಸಿ ನಾಯಕರು. ಸಂಜೆ ಈ ಬಗ್ಗೆ ನಿರ್ಧಾರ ಆಗಲಿದೆ ಎಂದರು.
ಕಾಂಗ್ರೆಸ್ ಗೆ ಸಿಪಿವೈ ಅನಿವಾರ್ಯವೇ ಎಂಬ ಪ್ರಶ್ನೆಗೆ,ಕಾಂಗ್ರೆಸ್ ಗೆ ಯಾರೂ ಅನಿವಾರ್ಯ ಅಲ್ಲ. ತತ್ವ ಸಿದ್ದಾಂತ ನಂಬಿ ಬಂದರೆ ಎಲ್ಲರನ್ನೂ ಸ್ವಾಗತ ಮಾಡ್ತೇವೆ. ಡಿಕೆ ಶಿವಕುಮಾರ್ ಕೈ ಬಲಪಡಿಸಲು ಹಾಗೂ ಚನ್ನಪಟ್ಟಣ ಅಭಿವೃದ್ಧಿ ದೃಷ್ಟಿಯಿಂದ ಸಿಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಈ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ ಎಂದರು.
ಸಿಪಿವೈ ಸೇರ್ಪಡೆ ಮೂಲಕ ರಾಮನಗರ ರಾಜಕೀಯದಿಂದ ಎಚ್ ಡಿ ಕುಮಾರಸ್ವಾಮಿ ಅವರನ್ನು ದೂರವಿಡುವ ಪ್ರಯತ್ನವೇ ಎಂಬ ಪ್ರಶ್ನೆಗೆ, ಕುಮಾರಸ್ವಾಮಿ ಅವರನ್ನು ರಾಮನಗರಕ್ಕೆ ನಾಯಕ ಎಂದು ತೀರ್ಮಾನ ಮಾಡುವುದಾದರೆ ನನಗೇನು ಅಭ್ಯಂತರ ಇಲ್ಲ ಎಂದರು. ನಾನು ಚನ್ನಪಟ್ಟಣಕ್ಕೆ ಅಚ್ಚರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದಿದ್ದೆ. ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಚನ್ನಪಟ್ಟಣದಲ್ಲಿ ಕಾರ್ಯಕರ್ತರಿಗೆ ಧನ್ಯವಾದ ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದೆ.
ಇದೀಗ ಅಭ್ಯರ್ಥಿ ಯಾರೆಂದು ಸ್ಪಷ್ಟಗೊಂಡಿದೆ ಎಂದರು.ಸಿಪಿವೈಯನ್ನು ಕಣಕ್ಕೆ ಇಳಿಸುವ ಮೂಲಕ ಎಚ್ ಡಿ ಕುಮಾರಸ್ವಾಮಿಗೆ ಸವಾಲು ಹಾಕುತ್ತಿದ್ದೀರಾ? ಎಂಬ ಪ್ರಶ್ನೆಗೆ, ನಾವು ಸಾಮಾನ್ಯ ಜನ, ಯಾರಿಗೂ ಸವಾಲು ಹಾಕಲು ಹೋಗಲ್ಲ. ಪಿಎಂ ಕುಟುಂಬದವರು ಅಲ್ಲ. ಜನರಿಗೆ ಋಣ ತೀರಿಸಬೇಕಿದೆ. ಜನರ ಬದುಕನ್ನು ಸರಿಪಡಿಸುವುದು ನಮ್ಮ ಉದ್ದೇಶ ಎಂದರು.