ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗಿರುವ ಬೆಂಗಳೂರಿಗರಿಗೆ ಬಿಎಂಆರ್‌ಸಿಎಲ್ ಹಾಗೂ ಬಿಎಂಟಿಸಿ ವತಿಯಿಂದ ದೊಡ್ಡ ಗುಡ್ ನ್ಯೂಸ್ ಸಿಕ್ಕಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಡಿಸೆಂಬರ್ 31ರ ತಡರಾತ್ರಿಯಿಂದ ಜನವರಿ 1ರ ಬೆಳಗಿನಜಾವದವರೆಗೆ ಮೆಟ್ರೋ ರೈಲು ಹಾಗೂ ಬಿಎಂಟಿಸಿ ಬಸ್ ಸೇವೆಗಳನ್ನು ವಿಸ್ತರಣೆ ಮಾಡಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ. ಡಿಸೆಂಬರ್ 31ರಂದು ರಾತ್ರಿ ಸಾಮಾನ್ಯ ಸೇವೆ ಮುಗಿದ ಬಳಿಕ ವಿಸ್ತರಿತ ಮೆಟ್ರೋ ಸಂಚಾರ ಆರಂಭವಾಗಲಿದೆ. ಜನವರಿ 1ರ ಬೆಳಗಿನಜಾವ 3:10ರವರೆಗೆ ಮೆಟ್ರೋ ರೈಲುಗಳು ಸಂಚರಿಸಲಿವೆ.
ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದವರೆಗೆ ರಾತ್ರಿ 1:45ರವರೆಗೆ ಮೆಟ್ರೋ ಸಂಚಾರ ಇರಲಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ಕಡೆಗೆ ರಾತ್ರಿ 2ರವರೆಗೆ ರೈಲುಗಳು ಓಡಾಡಲಿವೆ. ಹಸಿರು ಮಾರ್ಗದಲ್ಲಿ ರಾತ್ರಿ 2ರವರೆಗೆ ಮೆಟ್ರೋ ಸೇವೆ ಲಭ್ಯವಿರಲಿದೆ. ಹಳದಿ ಮಾರ್ಗದಲ್ಲಿ ಆರ್.ವಿ. ರಸ್ತೆದಿಂದ ಬೊಮ್ಮಸಂದ್ರದವರೆಗೆ ಬೆಳಗಿನಜಾವ 3:10ರವರೆಗೆ ಮೆಟ್ರೋ ರೈಲುಗಳು ಸಂಚರಿಸಲಿವೆ. ಬೊಮ್ಮಸಂದ್ರದಿಂದ ಆರ್.ವಿ. ರಸ್ತೆ ಕಡೆಗೆ ರಾತ್ರಿ 1:30ರವರೆಗೆ ಸೇವೆ ಲಭ್ಯವಿರಲಿದೆ.
ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಪ್ರತಿ 8 ನಿಮಿಷಗಳಿಗೊಮ್ಮೆ ಮೆಟ್ರೋ ರೈಲುಗಳು ಸಂಚರಿಸಲಿದ್ದು, ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳ ಓಡಾಟ ಇರಲಿದೆ.
ಇನ್ನು ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಎಂ.ಜಿ. ರಸ್ತೆ ಪ್ರದೇಶದಲ್ಲಿ ಭಾರೀ ಜನಸಂದಣಿ ನಿರೀಕ್ಷೆಯಿರುವುದರಿಂದ ಡಿಸೆಂಬರ್ 31ರ ರಾತ್ರಿ 10 ಗಂಟೆಯಿಂದ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಆದರೆ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳು ತೆರೆಯೇ ಇರಲಿವೆ.
ಇದಷ್ಟೇ ಅಲ್ಲದೆ, ಡಿಸೆಂಬರ್ 31ರಂದು ತಡರಾತ್ರಿವರೆಗೂ ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ಪ್ರಮುಖ ಭಾಗಗಳಿಂದ ವಿವಿಧ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ. ರಾತ್ರಿ 11ರಿಂದ ತಡರಾತ್ರಿ 2ರವರೆಗೆ ಹೆಚ್ಚುವರಿ ಬಸ್ ಸೇವೆ ಲಭ್ಯವಿರಲಿದೆ.
ಎಲೆಕ್ಟ್ರಾನಿಕ್ಸ್ ಸಿಟಿ, ಜಿಗಣಿ, ಸರ್ಜಾಪುರ, ಕೆಂಗೇರಿ, ಯಲಹಂಕ, ಹೊಸಕೋಟೆ, ಬನಶಂಕರಿ, ಕಾಡುಗೋಡಿ, ಜೀವನ್ ಭೀಮಾನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

