ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ‘ಬ್ರೆಕ್‌ಫಾಸ್ಟ್ ಮೀಟಿಂಗ್’ಗಳ ಜ್ವರ ಹೆಚ್ಚಾಗಿದೆ. ಹೈಕಮಾಂಡ್ ಸೂಚನೆಯ ಬಳಿಕ ಕೈ ಪಾಳಯದಲ್ಲಿ ನಡೆಯುತ್ತಿರುವ ಈ ಉಪಹಾರ ರಾಜಕೀಯ ಇದೀಗ ಹೊಸ ಕುತೂಹಲಕ್ಕೆ ಕಾರಣವಾಗಿದೆ.
ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉಪಹಾರ ಸೇವಿಸಿದ್ದರೆ, ಇಂದು ಡಿಸಿಎಂ ಡಿಕೆ ಅವರ ಸದಾಶಿವನಗರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಉಪಹಾರಕ್ಕೆ ಹಾಜರಾದರು.
ಡಿಕೆ ನಿವಾಸದಲ್ಲಿ ವಿಶೇಷ ಉಪಹಾರ ಕೂಟ ಏರ್ಪಾಡಾಗಿದ್ದು, ಸಿಎಂಗಾಗಿ ನಾಟಿ ಕೋಳಿ ಸಾರು, ರಾಗಿ ಮುದ್ದೆ ಸೇರಿದ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯ ಅವರ ಜೊತೆ ಹಲವು ಸಚಿವರು ಡಿಕೆ ನಿವಾಸಕ್ಕೆ ಆಗಮಿಸಿದ್ದರಿಂದ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳು ಮತ್ತೆ ವೇಗ ಪಡೆದಿವೆ.
ಈ ಉಪಹಾರ ಕೂಟಗಳು ಸರ್ಕಾರದ ಒಳಾಂಗಣ ಸರಿಹೊರಹೆಯ ಕಾರ್ಯಾಚರಣೆಗಳ ಭಾಗವೇ? ಅಥವಾ ಮುಂಬರುವ ರಾಜಕೀಯ ಚಟುವಟಿಕೆಗಳ ಪೂರ್ವಭಾವಿ ಕೂಟವೇ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

