Siddaramaiah : ”ಜನರ ಅಭಿಪ್ರಾಯವೇನೇ ಇದ್ದರೂ, ಹೈಕಮಾಂಡ್ ನಿರ್ಧಾರವೇ ಅಂತಿಮ. ಪಕ್ಷದ ವರಿಷ್ಠರು ಈ ಬಗ್ಗೆ ಏನೂ ಹೇಳಿಲ್ಲ. ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ಸಂಪುಟ ಪುನರ್‌ರಚನೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲಾಗುವುದುʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು. ಮೈಸೂರಿನ ವಿಮಾನ ನಿಲ್ದಾಣದಲ್ಲಿ ನವೆಂಬರ್ 3ರಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿಎಂ ಬದಲಾವಣೆ ಬಗ್ಗೆ ಹರಡಿರುವ ವದಂತಿಯನ್ನು ತಳ್ಳಿ ಹಾಕಿದರು.
ʼʼಬಿಹಾರದಲ್ಲಿ ಅಧಿಕಾರ ವಿರೋಧಿ ಅಲೆ ಮತ್ತು ಬಿಜೆಪಿಯ ಭ್ರಷ್ಟ ಹಾಗೂ ದುರಾಡಳಿತದ ಅಂಶಗಳು ಪ್ರಮುಖವಾಗಲಿದ್ದು, ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆʼʼ ಎಂದರು.
ಬಿಹಾರ ಚುನಾವಣೆ ಪ್ರಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ʼʼಪ್ರಚಾರಕ್ಕೆ ಕರೆ ಬಂದರೆ ಅಗತ್ಯವಾಗಿ ತೆರಳುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ. ಬಿಹಾರ ಮತದಾರರಿಗೆ ಮತ ನೀಡಲು ಕೋರಲಾಗುವುದುʼʼ ಎಂದು ಹೇಳಿದರು.

