ಚಿತ್ರದುರ್ಗ, ಮಾ.15: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ರಿಸರ್ವ್ ಸಬ್‌ಇನ್‌ಸ್ಪೆಕ್ಟರ್‌ಗಳು (RSI) ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ಸಂಭವಿಸಿದ ಈ ಅಪಘಾತವು ಪೊಲೀಸ್ ವಲಯದಲ್ಲಿ ತೀವ್ರ ದುಃಖವನ್ನುಂಟುಮಾಡಿದೆ.
ಅಪಘಾತದಲ್ಲಿ ರಿಸರ್ವ್ ಸಬ್‌ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್, ಅಂಬರೀಶ್ ಮತ್ತು ಸಚಿನ್ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಕಾರಿನಲ್ಲಿ ಇದ್ದ ಇನ್ನು ಇಬ್ಬರು ಅಧಿಕಾರಿಗಳಾದ ಪಿಎಸ್‌ಐ ಈಶ್ವರ್ ಹಾಗೂ ಆರ್‌ಎಸ್‌ಐ ಮಹಾಂತೇಶ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ಸುಮಾರು 7 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಬಳ್ಳಾರಿ ಕಡೆಗೆ ಪ್ರಯಾಣಿಸುತ್ತಿದ್ದ ಐದು ಪೊಲೀಸ್ ಅಧಿಕಾರಿಗಳು ಒಂದೇ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಮುಂದೆ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸ ಎಷ್ಟೋ ತೀವ್ರವಾಗಿದ್ದರಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸುಮಾರು 300 ಮೀಟರ್ ದೂರದವರೆಗೆ ಎಳೆದೊಯ್ಯಲ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಮಾಹಿತಿ ತಿಳಿದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹಿರಿಯೂರು ಡಿವೈಎಸ್‌ಪಿ ಶಿವಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಘಟನೆ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ಈ ಐವರು ಪೊಲೀಸ್ ಅಧಿಕಾರಿಗಳು ಬೆಂಗಳೂರಿನಿಂದ ಬಳ್ಳಾರಿಯಲ್ಲಿ ನಡೆಯಲಿದ್ದ ತಮ್ಮ ಸ್ನೇಹಿತರೊಬ್ಬರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

