ಬೆಂಗಳೂರು, ಫೆ.19: ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಕಾಶಿ ಹಾಗೂ ಪ್ರಯಾಗರಾಜ್ ಯಾತ್ರೆ ಮುಗಿಸಿಕೊಂಡು ಬೆಂಗಳೂರಿಗೆ ಮರಳಿದ ಅವರು, ನಿನ್ನೆ ರಾತ್ರಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದ ಮಳೆ-ಬೆಳೆ, ದೇಶ-ವಿದೇಶಗಳ ಬೆಳವಣಿಗೆಗಳು ಮತ್ತು ಕರ್ನಾಟಕದ ರಾಜಕೀಯ ಬದಲಾವಣೆಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ರಾಜಕೀಯದಲ್ಲಿ ಬಜೆಟ್‌ವರೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಮುಂದೆಯೂ ಸ್ಥಿತಿ ಸ್ಥಿರವಾಗಿರುತ್ತದೆ. ಯುಗಾದಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಅಧಿಕಾರ ತ್ಯಜಿಸಿದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಸ್ವಾಮೀಜಿ ಹೇಳಿದರು.
ಶಾಸಕರ ಪ್ರವಾಸದಿಂದ ಯಾವುದೇ ರಾಜಕೀಯ ಸಂಕಷ್ಟ ಉಂಟಾಗುವುದಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿ. ಪರಮೇಶ್ವರ್ ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಇರಲಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಅವರು ಆಶಿಸಿದರು. ಈ ವರ್ಷ ಕರ್ನಾಟಕದಲ್ಲಿ ಉತ್ತಮ ಮಳೆ ಮತ್ತು ಉತ್ತಮ ಬೆಳೆಯಾಗಲಿದೆ. ಆದರೆ ಜಗತ್ತಿನ ಮಟ್ಟದಲ್ಲಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಕಷ್ಟಗಳು ಎದುರಾಗಬಹುದು. ನೀರಿನ ಅಭಾವ ಹಾಗೂ ಯುದ್ಧ ಪರಿಸ್ಥಿತಿಗಳು ತಲೆದೋರಲಿವೆ ಎಂದು ಅವರು ಎಚ್ಚರಿಸಿದರು.
ಶಿವರಾತ್ರಿ ಪೂಜೆಗೆಂದು ಕಾಶಿಗೆ ತೆರಳಿ ಉತ್ತಮ ದರ್ಶನ ಪಡೆದಿದ್ದೇನೆ. ಅಲ್ಲದೆ ಪ್ರಯಾಗರಾಜ್‌ನಲ್ಲಿಯೂ ಪ್ರಾರ್ಥನೆ ಸಲ್ಲಿಸಿದ್ದೇನೆ. ಕರ್ನಾಟಕದಲ್ಲಿ ಸಮೃದ್ಧ ಮಳೆ-ಬೆಳೆ ಆಗಲಿ ಎಂದು ಬೇಡಿಕೊಂಡಿದ್ದೇನೆ ಎಂದು ಹೇಳಿದರು.
ಕೋಡಿಶ್ರೀಗಳು ಈ ಹಿಂದೆ ಉತ್ತರ ಭಾಗದಲ್ಲಿ “ರಕ್ತ ಹರಿಯಲಿದೆ, ಯುದ್ಧ ಭೀತಿ ಕಾರ್ಮೋಡದಂತೆ ಆವರಿಸಲಿದೆ” ಎಂದು ಭವಿಷ್ಯ ನುಡಿದಿದ್ದರು. ಬಳಿಕ ನಡೆದ ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ ಘಟನೆಗಳನ್ನು ಉಲ್ಲೇಖಿಸಿ, ಅವರ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಇದೀಗ ಅಮೆರಿಕ, ರಷ್ಯಾ, ಉಕ್ರೇನ್, ಇರಾನ್ ಮತ್ತು ಇರಾಕ್ ನಡುವಿನ ಬಿಕ್ಕಟ್ಟುಗಳ ಹಿನ್ನೆಲೆ ಜಗತ್ತಿನಲ್ಲಿ ಯುದ್ಧ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ಸೂಚಿಸಿದ್ದಾರೆ.

