ಬೆಂಗಳೂರು: ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದುಃಖದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಭಾಗವು ಮಹತ್ವದ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದೆ. ದುರಂತಕ್ಕೆ ಕಾರಣವಾದ ನಿರ್ವಹಣಾ ವೈಫಲ್ಯಗಳ ಕುರಿತು ಸಮಗ್ರ ತನಿಖೆ ನಡೆಸಿದ ಬಳಿಕ ವರದಿ ಸಲ್ಲಿಸಲಾಗಿದೆ.
ತನಿಖಾ ಅಧಿಕಾರಿಗಳ ಪ್ರಕಾರ, ಪಂದ್ಯ ಕಾರ್ಯಕ್ರಮದ ವ್ಯವಸ್ಥೆಯನ್ನು ನೋಡಿಕೊಂಡ ಆರ್‌ಸಿಬಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಮತ್ತು ಕಾರ್ಯಕ್ರಮ ಹಮ್ಮಿಕೊಂಡಿದ್ದ ಡಿಎನ್‌ಎ ಸಂಸ್ಥೆಗಳು ಘಟನೆಯಲ್ಲಿ ನೇರ ಹೊಣೆಗಾರರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಿಐಡಿ ವರದಿ ಪ್ರಕಾರ:
ಪಂದ್ಯಕ್ಕೆ ಅಗತ್ಯವಾದ ಜನಸಂದಣಿ ನಿರ್ವಹಣೆ ಹಾಗೂ ಕಾರ್ಯಕ್ರಮದ ಯೋಜನೆ ಅತ್ಯಂತ ದುರ್ಭಲವಾಗಿತ್ತು.
ಪ್ರವೇಶಕ್ಕೆ ಸಂಬಂಧಿಸಿದ ಟಿಕೆಟ್ ವಿತರಣೆ, ಪರಿಶೀಲನೆ ಮತ್ತು ನಿಯಂತ್ರಣ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿತ್ತು.
ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ನಿಯಂತ್ರಣ ಕ್ರಮಗಳು ಸಮರ್ಪಕವಾಗಿರದಿರುವುದು ತೀವ್ರ ದುರಂತಕ್ಕೆ ಕಾರಣವಾಗಿದೆ.
ಈ ಎಲ್ಲಾ ಕಾರಣಗಳು ಸೇರಿ ಪಂದ್ಯ ವೀಕ್ಷಣೆಗೆ ಬಂದ ಜನ ಸಿಡಿದು ಓಡಾಡಿದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ, 11ಜನರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಗಾಯಗೊಂಡ ಹಲವು ಜನರನ್ನು ಆಗಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಹೊಣೆಗಾರ ಸಂಸ್ಥೆಗಳ ವಿರುದ್ಧ ಇದೀಗ ಕಾನೂನು ಕ್ರಮಗಳು ಮುಂದಿನ ಹಂತಕ್ಕೆ ಸಾಗುತ್ತಿದ್ದು, ದುರಂತಕ್ಕೆ ಕಾರಣವಾದ ವೈಫಲ್ಯಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.

