ಚಿತ್ರದುರ್ಗ, ಜನವರಿ 11: ಚಿತ್ರದುರ್ಗದಲ್ಲಿ ಶನಿವಾರ ರಾತ್ರಿ ಎರಡು ಪ್ರತ್ಯೇಕ ರಸ್ತೆ ಅಪಘಾತ ಸಂಭವಿಸಿದ್ದು, ಒಟ್ಟು ಆರು ಜನ ಸಾವನ್ನಪ್ಪಿದ್ದಾರೆ.ಪ್ರವಾಸ ಮುಗಿಸಿ ಕೊಲ್ಲಾಪುರಕ್ಕೆ ವಾಪಾಸು ಬರುತ್ತಿದ್ದ ವೇಳೆ ಡಿವೈಎಸ್‌ಪಿ ವೈಷ್ಣವಿ ಹಾಗೂ ಅವರ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ತಮಟಕಲ್ಲು ಗ್ರಾಮದ ಸಮೀಪದ ಬ್ರಿಡ್ಜ್ ಬಳಿ ವೇಗವಾಗಿ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಅಪಘಾತದಲ್ಲಿ ಕೊಲ್ಲಾಪುರ ಡಿವೈಎಸ್‌ಪಿ ವೈಷ್ಣವಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ವೈಷ್ಣವಿ ಅವರ ತಾಯಿ 65 ವರ್ಷದ ಕಮಲ ಹರಿಬಾಬು ಹಾಗೂ ಕಾರು ಚಾಲಕ 40 ವರ್ಷದ ರಾಕೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಮೂವರು ಗಾಯಾಳುಗಳನ್ನು ತಕ್ಷಣ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತಮಿಳುನಾಡು ಪ್ರವಾಸ ಮುಗಿಸಿ ಕೊಲ್ಲಾಪುರಕ್ಕೆ ವಾಪಾಸು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಲಾರಿಯ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮತ್ತೊಂದು ಅಪಘಾತದಲ್ಲಿ ನಾಲ್ವರು ಯುವಕರ ಸಾವು :
ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದ ಬಳಿ ಇರುವ ಅಪಘಾತ ವಲಯವಾದ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ.
ಹಿರಿಯೂರು ತಾಲ್ಲೂಕಿನ ನಂಜಯ್ಯನಕೊಟ್ಟಿಗೆ ಗ್ರಾಮದ ನಿವಾಸಿಗಳಾದ ವಿಶ್ವನಾಥ್(22), ನಂಜುಂಡಿ(23), ರಾಹುಲ್(23) ಮತ್ತು ಯಶವಂತ್ (22) ಎಂಬ ಯುವಕರು ಮೃತಪಟ್ಟಿದ್ದಾರೆ. ಮೃತಪಟ್ಟ ಯುವಕರ ಮೃತದೇಹಗಳನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದಿದೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

