ಎರಡು ಬಾರಿ ವಿಶ್ವ ಚಾಂಪಿಯನ್ ಆದ ವೇಳೆ ಇಂಗ್ಲೆಂಡ್ ತಂಡದ ಪರ ಮಿಂಚಿದ ಸ್ಟಾರ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಕ್ರಿಸ್ ವೋಕ್ಸ್ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
ಕ್ರಿಸ್ ವೋಕ್ಸ್ ಕೊನೆಯ ಬಾರಿಗೆ ಭಾರತ ವಿರುದ್ಧದ ಓವಲ್ ಟೆಸ್ಟ್ ಪಂದ್ಯದಲ್ಲಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಭುಜದ ಗಾಯಕ್ಕೆ ತುತ್ತಾಗಿದ್ದರು. ಬಳಿಕ ನೋವಿನಲ್ಲೂ ಬ್ಯಾಟಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.
ಆ ಕ್ಷಣ ಬಂದಿದೆ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಸರಿಯಾದ ಸಮಯ ಎಂದು ನಿರ್ಧರಿಸಿದ್ದೇನೆ. ಇಂಗ್ಲೆಂಡ್ ಪರ ಆಡುವುದು ನನ್ನ ಕನಸಾಗಿತ್ತು. ಆ ಕನಸುಗಳನ್ನು ನನಸಾಗಿಸಲು ನನಗೆ ಅವಕಾಶ ಸಿಕ್ಕಿದ್ದು ತುಂಬಾ ಅದೃಷ್ಟ ಅಂದುಕೊಂಡಿದ್ದೇನೆ.
ಮುಂದಿನ ದಿನಗಳಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಆಡುವುದು ಮತ್ತು ಹೆಚ್ಚಿನ ಫ್ರಾಂಚೈಸಿ ತಂಡಗಳ ಪರ ಆಡುವ ಅವಕಾಶಗಳನ್ನು ಹುಡುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ವೋಕ್ಸ್ ಹೇಳಿದ್ದಾರೆ.

