ಮೈಸೂರು: ‘ನಮ್ಮ ಸರ್ಕಾರ ಐದು ವರ್ಷ ಬಂಡೆ ರೀತಿ ಇರುತ್ತದೆ. ನನ್ನ ಹಾಗೂ ಶಿವಕುಮಾರ್ ನಡುವೆ ಯಾರೇ ತಂದು ಹಾಕುವ ಪ್ರಯತ್ನ ಮಾಡಿದರೂ ಪ್ರಯೋಜನವಿಲ್ಲ. ನಾವಿಬ್ಬರೂ ಒಗ್ಗಟ್ಟಾಗಿ ಇದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ಅವರು ‘ ನಮ್ಮ ಬಗ್ಗೆ ಮಾತನಾಡುವ ಶ್ರೀರಾಮುಲು ಎಷ್ಟು ಚುನಾವಣೆ ಸೋತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ನಾನು ಈ ಬಾರಿಯ ದಸರಾ ಉದ್ಘಾಟಿಸುವುದು ಸತ್ಯ’ ಎಂದರು. ‘ರಣದೀಪಸಿಂಗ್ ಸುರ್ಜೇವಾಲ ಈ ರಾಜ್ಯದ ಕಾಂಗ್ರೆಸ್ ಉಸ್ತುವಾರಿ. ಅವರು ನಮ್ಮ ಪಕ್ಷದ ಶಾಸಕರ ಕಷ್ಟ-ಸುಖ ಕೇಳುತ್ತಾರೆ. ಅದರಲ್ಲಿ ವಿಶೇಷವೇನಿಲ್ಲ’ ಎಂದರು.
ನಾನೇ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಮಾಧ್ಯಮದವರಿಗೆ ಅನಿಸಿದೆ ಅಲ್ವಾ. ಅದೇ ಸತ್ಯ ಎಂದು ಹೇಳುವ ಮೂಲಕ ಈ ಬಾರಿ ಸಿದ್ದರಾಮಯ್ಯ ದಸರಾ ಉದ್ಘಾಟನೆ ಮಾಡುವುದಿಲ್ಲ ಎಂದಿದ್ದ ಅಶೋಕ್‌ಗೆ ತಿರುಗೇಟು ನೀಡಿದರು.
ಸುರ್ಜೇವಾಲಾ ಅವರು ಈ ರಾಜ್ಯದ ಕಾಂಗ್ರೆಸ್ ಉಸ್ತುವಾರಿ. ಕಾಂಗ್ರೆಸ್ ಶಾಸಕರ ಕಷ್ಟ ಸುಖ ಕೇಳುತ್ತಾರೆ. ಪಕ್ಷ ಸಂಘಟನೆ ಬಗ್ಗೆ ಸಲಹೆ ಕೊಡುತ್ತಾರೆ. ಅದು ಅವರ ಕೆಲಸ, ಇದರಲ್ಲಿ ಬೇರೆ ಏನು ವಿಶೇಷ ಇಲ್ಲ ಎಂದರು.

