ಬೆಂಗಳೂರು, ಡಿಸೆಂಬರ್ 27: ರಾಜ್ಯಾದ್ಯಂತ ಮಾಗಿಚಳಿಯ ತೀವ್ರತೆ ಮುಂದುವರಿದಿದ್ದು, ಬೀದರ್‌ನಲ್ಲಿ ಕನಿಷ್ಠ ತಾಪಮಾನ 6.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ನಿನ್ನೆಯಿಂದೀಚೆಗೆ ಕನಿಷ್ಠ ತಾಪಮಾನದಲ್ಲಿ ಅಲ್ಪ ಏರಿಕೆ ಕಂಡುಬಂದಿದ್ದರೂ, ವಾಡಿಕೆಗಿಂತ ಹೆಚ್ಚು ಚಳಿ ಮುಂದುವರಿದಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಡಿಸೆಂಬರ್ 29ರಿಂದ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಕನಿಷ್ಠ ತಾಪಮಾನದಲ್ಲಿ ಸ್ವಲ್ಪ ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೂ ಶೀತಗಾಳಿಯ ಪ್ರಭಾವ ಮುಂದುವರಿಯಲಿದ್ದು, ಹಗಲು-ರಾತ್ರಿ ಎನ್ನದೇ ಚಳಿ ಜನರನ್ನು ಕಾಡುತ್ತಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಪ್ರಕಾರ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗಿದ್ದು, ದಕ್ಷಿಣ ಒಳನಾಡಿನಲ್ಲಿ 12 ರಿಂದ 14 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಕಂಡುಬರುತ್ತಿದೆ. ಕರಾವಳಿ ಪ್ರದೇಶಗಳಲ್ಲಿ 17 ರಿಂದ 19 ಡಿಗ್ರಿ ಸೆಲ್ಸಿಯಸ್‌ವರೆಗೆ ಕನಿಷ್ಠ ತಾಪಮಾನ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್ ಆಗಿದೆ.
ಇನ್ನೊಂದೆಡೆ, ಗರಿಷ್ಠ ತಾಪಮಾನ ಕರಾವಳಿ ಭಾಗದಲ್ಲಿ ಸ್ವಲ್ಪ ಹೆಚ್ಚಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರಾಸರಿ 27 ರಿಂದ 29 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿದೆ. ವಾತಾವರಣದಲ್ಲಿ ಪದೇಪದೇ ಆಗುತ್ತಿರುವ ಬದಲಾವಣೆಗಳಿಂದಾಗಿ ತಾಪಮಾನದಲ್ಲಿ ಏರಿಳಿತ ಕಂಡುಬರುತ್ತಿದೆ.

