ಬೆಂಗಳೂರು : ಬಿಜೆಪಿ ಮತ್ತು ಜೆಡಿಎಸ್ ಮೂಡಾ ಹಗರಣವನ್ನು ಖಂಡಿಸಿ ಹಮ್ಮಿಕೊಂಡಿರುವ ಜಂಟಿ ಪಕ್ಷಗಳ ಪಾದಯಾತ್ರೆಗೆ ಕಾಂಗ್ರೆಸ್ ಪೋಸ್ಟರ್ ಗಳ ಮೂಲಕ ಕೌಂಟರ್ ನೀಡಿದೆ.
ಮೂಡ ಹಗರಣದಲ್ಲಿ ಸಿಲುಕಿರುವ ಬಿಜೆಪಿ ಜೆಡಿಎಸ್, ಭ್ರಷ್ಟ ಬಿಜೆಪಿ ಜೆಡಿಎಸ್ ಕಳ್ಳರ ಪಾದಯಾತ್ರೆಗೆ ಸ್ವಾಗತ..ಎಂದು ರಸ್ತೆಯುದ್ದಕ್ಕೂ ಬ್ಯಾನರ್ ಗಳನ್ನ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರು ಎರಡೂ ಪಕ್ಷಗಳಿಗೆ ಮುಜುಗರ ತಂದೊಡ್ಡಲು ಸಿದ್ದತೆ ನಡೆಸಿದ್ದಾರೆ.
ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅಪಪ್ರಚಾರ ನಡೆಸಲು ಪ್ರಾರಂಭಿಸುತ್ತಿರುವ ಪಾದಯಾತ್ರೆಗೆ ಧಿಕ್ಕಾರ ಎಂದೂ ಕಾಂಗ್ರೆಸ್ ಕಾರ್ಯಕರ್ತರು ಕಿಡಿ ಕಾರಿದ್ದು, ಬಿಜೆಪಿ ಆಡಳಿತದಲ್ಲಿ ಹಣವನ್ನು ಲೂಟಿ ಮಾಡಿದ 40% ಕಳ್ಳರೇ ನೀವು ಯಾವ ಪುರುಷಾರ್ಥಕ್ಕಾಗಿ ಪಾದಯಾತ್ರೆ ಮಾಡುತ್ತೀರಿ ಎಂದು ಪೋಸ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
ನೈಸ್ ವೃತ್ತದಲ್ಲಿ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಭಿತ್ತಿ ಪತ್ರ ಅಂಟಿಸಿದ್ದು, ನಗರದಲ್ಲಿ ಹಲವೆಡೆ ಈ ಭಿತ್ತಿಪತ್ರಗಳು ರಾರಾಜಿಸುತ್ತಿವೆ.

