Dakshina Kannada : ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಆಕಾಂಕ್ಷ ಮೃತ ಏರೋಸ್ಪೇಸ್ ಎಂಜಿನಿಯರ್. ಮೇ 17ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಆಕಾಂಕ್ಷ ಮನೆಯವರು ಪಂಜಾಬ್‌ಗೆ ತೆರಳಿದ್ದಾರೆ.
ಧರ್ಮಸ್ಥಳದ ಬೋಳಿಯಾರ್ ನಿವಾಸಿಗಳಾದ ಸುರೇಂದ್ರ ಹಾಗೂ ಸಿಂದೂದೇವಿ ದಂಪತಿ ಮಗಳಾದ ಆಕಾಂಕ್ಷ ಪಂಜಾಬಿನ ಫಗ್ವಾಡಾ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರೈಸಿ ಆರು ಹಿಂಗಳ ಹಿಂದೆ ದೆಹಲಿಯಲ್ಲಿ ಏರೋಸ್ಪೇಸ್ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು.
ಜಪಾನಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಆಕಾಂಕ್ಷ ಶೈಕ್ಷಣಿಕ ಪ್ರಮಾಣ ಪತ್ರ ಪಡೆಯಲು ಪಂಜಾಬ್‌ಗೆ ತೆರಳಿದ್ದರು. ಶೈಕ್ಷಣಿಕ ಪ್ರಮಾಣ ಪತ್ರ ಪಡೆದ ನಂತರ ಆಕಾಂಕ್ಷ ಮನೆಯವರಿಗೆ ಕರೆ ಮಾಡಿ ಮಾತನಾಡಿದ್ದರು. ನಂತರ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಪಂಜಾಬ್‌ಗೆ ತೆರಳಿದ ಪೋಷಕರು :
ಮಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆ ಮೃತ ಆಕಾಂಕ್ಷಾ ಪೋಷಕರಾದ ಸುರೇಂದ್ರ ಮತ್ತು ಸಿಂಧೂದೇವಿ ನಿನ್ನೆಯೇ ಪಂಜಾಬ್‌ಗೆ ತೆರಳಿದ್ದಾರೆ. ಘಟನೆ ಕುರಿತು ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಂಜಾಬ್‌ನ ಎಲ್.ಸಿ.ಯು ಪಗ್ವಾಡ ಕಾಲೇಜಿನಲ್ಲಿ ಓದಿದ್ದ ಆಕಾಂಕ್ಷಾ, 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಉದ್ಯೋಗಕ್ಕೆ ಜಪಾನ್‌ಗೆ ಹೋಗಲು ಪ್ಲಾನ್ ಕೂಡ ನಡೆಸಿದ್ದರು. ಇದಕ್ಕಾಗಿ ನಿನ್ನೆ ಕಾಲೇಜಿಗೆ ತೆರಳಿ ಸರ್ಟಿಫಿಕೇಟ್ ಪಡೆದುಕೊಂಡು ಬಂದಿದ್ದರು. ಈ ವಿಚಾರವನ್ನು ಫೋನ್ ಮಾಡಿ ಆಕಾಂಕ್ಷಾ ತನ್ನ ಪೋಷಕರಿಗೂ ತಿಳಿಸಿದ್ದಾಳೆ. ಆದರೆ ದಿಢೀರ್ ಈ ಘಟನೆ ನಡೆದಿರೋದು ಸಾಕಷ್ಟು ಅನುಮಾನ ಹುಟ್ಟುವಂತೆ ಮಾಡಿದೆ.
ಇನ್ನು ಪಂಜಾಬ್‌ಗೆ ತೆರಳುತ್ತಿದ್ದಾಗ ಮೃತ ಆಕಾಂಕ್ಷಾ ಪೋಷಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಶಾಸಕ ಹರೀಶ್ ಪೂಂಜಾ ಸಾಂತ್ವನ ಹೇಳಿದ್ದಾರೆ. ಈ ವೇಳೆ ‘ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದು ಕೊಲೆ ಆಗಿರಬಹುದು’ ಎಂದು ಆಕಾಂಕ್ಷಾ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

