ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇರೆಗೆ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ಮುಂದುವರಿದಿದೆ. ಇದೀಗ ದೇವರ ಮೂರ್ತಿ ಬಳಿಯೇ ದರ್ಶನ್ ಫೋಟೋ ಇಟ್ಟು ಪೂಜೆ ನಡೆಸಿರುವುದು ವಿವಾದಕ್ಕೆ ಗುರಿಯಾಗಿದೆ.
ಜಿಲ್ಲೆ ಕುರುಗೋಡಿನ ಬಸವೇಶ್ವರ ದೇಗುಲದಲ್ಲಿ ವಿಗ್ರಹದ ಬಳಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಲಾಗಿದ್ದು, ಇದೀಗ ಈ ಪೂಜೆ ಅರ್ಚಕರಿಗೆ ಸಂಕಷ್ಟ ತಂದಿಟ್ಟಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ದೊಡ್ಡಬಸವೇಶ್ವರ ದೇವರ ಪ್ರಾಣ ಮೂರ್ತಿ ಮುಂದೆ ಅರ್ಚಕರು ನಟ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ.
ಡೆವಿಲ್ ಎಂದು ಬರೆದಿರುವ ಪೋಸ್ಟರ್ ಸೇರಿದಂತೆ ದರ್ಶನ್ ವಿವಿಧ ಫೋಟೋಗಳನ್ನು ದೇವರ ಮುಂದೆ ಇಡಲಾಗಿದೆ. ದರ್ಶನ್ ಫೋಟೋದ ಬಳಿಯೂ ಕುಂಕುಮ ಹೂ ಇಟ್ಟು ಪೂಜೆ ಮಾಡಿ ಮಂಗಳಾರತಿ ಮಾಡಲಾಗಿದೆ.
ಆದರೆ ಇದೀಗ, ದೇವರ ಮುಂದೆ ದರ್ಶನ್ ಫೋಟೋ ಇಟ್ಟಯ ಪೂಜೆ ಮಾಡಿರುವುದು ದೇವಸ್ಥಾನದ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಂತೆ ಎಂದು ಅರ್ಚಕರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
ಅರ್ಚಕ ಮಲ್ಲಿ ದೇವಸ್ಥಾನದ ರೂಢಿ ಸಂಪ್ರದಾಯಕ್ಕೆ ಧಕ್ಕೆ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಧಾರ್ಮಿಕ ದತ್ತಿ ಇಲಾಖೆ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪರವರು ಅರ್ಚಕ ಮಲ್ಲಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಈ ಘಟನೆಯ ವಿಚಾರಣೆ ಮುಗಿಯುವವರೆಗೂ ದೇವಸ್ಥಾನಕ್ಕೆ ಬಾರದಂತೆ ನಿಷೇಧ ಹೇರಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಬಂಧಿತರಾಗಿದ್ದಾರೆ. ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿ ಆಗಿದ್ದು, ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ಇನ್ನು ಆರೋಪಿಗಳಿಗೆ ಆಗಸ್ಟ್ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪ್ರಕರಣದಲ್ಲಿ ಮೂರು ಜನ ಸಾಕ್ಷಿಗಳಿದ್ದು ಅವರನ್ನು ತುಮಕೂರಿನ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ದರ್ಶನ್ ಸೇರಿದಂತೆ ಇನ್ನುಳಿದ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದಾರೆ.