ಲಕ್ನೋ: ಲಕ್ನೋದ ಟ್ರಾನ್ಸ್ಪೋರ್ಟ್ ನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು 8 ಮಂದಿ ಸಾವನ್ನಪ್ಪಿ. ಸುಮಾರು 24 ಮಂದಿ ಗಾಯಗೊಂಡಿರುವ ಘಟನೆಶನಿವಾರ ಸಂಜೆ 5 ಗಂಟೆ ಸುಮಾರಿಗೆ ನಡೆದಿದೆ.
ಕಟ್ಟಡದ ಅವಶೇಷಗಳಲ್ಲಿ ಹುದುಗಿಕೊಂಡಿರುವವರನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ರಕ್ಷಣಾ ಪಡೆಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯದ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಮೂರನೇ ಮಹಡಿಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಇನ್ನೂ ಐವರು ಸಿಲುಕಿಕೊಂಡಿರುವ ಶಂಕೆಗಳು ವ್ಯಕ್ತವಾಗಿದ್ದು, ಕಟ್ಟಡದ ಬಳಿ ನಿಂತಿದ್ದ ಟ್ರಕ್‌ಗೂ ಹಾನಿಯಾಗಿದೆ. ಕಟ್ಟಡ ಕುಸಿದು ಬಿದ್ದಿದ್ದರಿಂದ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿತ್ತು. ಸದ್ಯ ಪೊಲೀಸ್ ತಂಡ ಹಾಗೂ ಇತರೆ ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು ಕಟ್ಟಡದ ಅವಶೇಷಗಳನ್ನು ತೆಗೆಯುವಲ್ಲಿ ನಿರತರಾಗಿದ್ದಾರೆ.
ಈ ಕಟ್ಟಡವನ್ನು ಉಗ್ರಾಣವಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂದು ವರದಿಯಾಗಿದೆ. ಮೂರನೇ ಮಹಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಹೀಗಾಗಿ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ 25ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

