ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಬಂಧನದ ನಂತರ ಎಸ್ಐಟಿ ಕಸ್ಟಡಿಯಲ್ಲಿರುವ ಮುಸುಕುಧಾರಿ ಚಿನ್ನಯ್ಯ , ವಿಚಾರಣೆ ವೇಳೆ ತಾನು ಬೆಂಗಳೂರಿನಲ್ಲಿ ಕೆಲವು ಕಾಲ ವಾಸವಿದ್ದಾಗಿ ಮತ್ತು ಕೆಲವರನ್ನು ಭೇಟಿಯಾಗಿದ್ದಾಗಿ ಹೇಳಿದ್ದ. ಆದ್ದರಿಂದ ಚಿನ್ನಯ್ಯನನ್ನು ಬೆಂಗಳೂರಿಗೆ ಕರೆತಂದು, ಎರಡನೇ ದೂರುದಾರ ಅಂತ ಹೇಳಿಕೊಳ್ಳುವ ಜಯಂತ್ ಮನೆಯಲ್ಲಿ ಮಹಜರ್ ಮಾಡಲಾಗಿದೆ.
ಮಾಸ್ಕ್ಮ್ಯಾನ್ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಪೀಣ್ಯದಲ್ಲಿ ಬಾಡಿಗೆ ಮನೆ ಪಡೆದಿದ್ದ ದೂರುದಾರ ಜಯಂತ್ ಮನೆಯಲ್ಲಿ ಸ್ಥಳ ಮಹಜರು ಮಾಡಿದ್ದಾರೆ. ಬುರುಡೆ ಗ್ಯಾಂಗ್ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ಮಾಸ್ಕ್ ಇಲ್ಲದೆಯೇ ಕರೆತಂದಿದ್ದಾರೆ.
ಇನ್ನೂ ಜಯಂತ್ ಮನೆಯಲ್ಲಿ ಬುರುಡೆ ಗ್ಯಾಂಗ್ ಪ್ಲಾನ್ ಮಾಡಿತ್ತು ಎಂದು ಹೇಳಲಾಗಿತ್ತು. ಇದೀಗ ಆ ಮನೆಗೆ ಸ್ಥಳ ಮಹಜರಿಗೆ ಚಿನ್ನಯ್ಯನನ್ನು ಕರೆತರಲಾಗಿದೆ.ಜಯಂತ್ ಬಳಿಕ ಗಿರೀಶ್ ಮಟ್ಟಣ್ಣನವರ್, ವಕೀಲರೊಬ್ಬರ ಮನೆಯಲ್ಲಿ ಎಸ್ಐಟಿ ಸ್ಥಳ ಮಹಜರು ಮಾಡಲಿದೆ. ಸಹಕಾರ ನಗರದ ಗಿರೀಶ್ ಮಟ್ಟಣ್ಣನವರ್ ನಿವಾಸದಲ್ಲಿ ಶೋಧಕಾರ್ಯ ನಡೆಯಲಿದೆ.
ಬುರುಡೆ ತರುವ ಮುನ್ನ ಜಯಂತ್ ಹಾಗೂ ಚಿನ್ನಯ್ಯ ವಕೀಲರೊಬ್ಬರನ್ನು ಭೇಟಿ ಮಾಡಿದ್ರಂತೆ. ಬೆಂಗಳೂರಿನ ಆ ವಕೀಲರೊಬ್ಬರ ಮನೆಯಲ್ಲಿ ಎಸ್ಐಟಿ ಮಹಜರ್ ಮಾಡುತ್ತಿದೆ ಎನ್ನಲಾಗುತ್ತಿದೆ. ಅದೇ ಲಾಯರ್, ಜಡ್ಜ್ ಎದುರು ಹೇಗೆಲ್ಲಾ ಹೇಳಿಕೆ ನೀಡಬೇಕು ಎಂಬ ಬಗ್ಗೆ ಚಿನ್ನಯ್ಯನಿಗೆ ಪಾಠ ಮಾಡಿದ್ರು ಎನ್ನಲಾಗಿದೆ.

