ಬೆಂಗಳೂರು, ಫೆಬ್ರವರಿ 26: ನಗರದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ Confident Groupನ ಮಾಲೀಕರಾಗಿದ್ದ C.J. Roy ಅವರ ಸಾವಿನ ಸುತ್ತ ಅನುಮಾನದ ಮಬ್ಬು ಗಟ್ಟಿಯಾಗುತ್ತಿದೆ. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಕೈಗೊಂಡಿದ್ದು, ಕೆಲವೇ ದಿನಗಳಲ್ಲಿ ಪ್ರಾಥಮಿಕ ವರದಿ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ರಾಯ್ ಅವರ ಸಾವಿಗೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ಹೊರಬಿದ್ದಿದ್ದು, ಸುಮಾರು 500 ಕೋಟಿ ರೂ. ಮೌಲ್ಯದ ಹವಾಲಾ ವ್ಯವಹಾರ ಶಂಕೆ ತನಿಖೆಗೆ ಹೊಸ ಟ್ವಿಸ್ಟ್ ನೀಡಿದೆ. ಅಕ್ರಮ ಹಣದ ಲೆಕ್ಕ ನೀಡುವ ವಿಚಾರದಲ್ಲಿ ಒತ್ತಡ ಹೆಚ್ಚಾಗಿದ್ದುದಾಗಿ ಹೇಳಲಾಗುತ್ತಿದೆ.
ಆದಾಯ ತೆರಿಗೆ ಇಲಾಖೆಯ ವಿಚಾರಣೆ ವೇಳೆ 500 ಕೋಟಿ ರೂಪಾಯಿ ಹಣದ ಮೂಲ ಹಾಗೂ ಲೆಕ್ಕಪತ್ರಗಳ ಬಗ್ಗೆ ಸ್ಪಷ್ಟನೆ ಕೇಳಲಾಗಿತ್ತು ಎನ್ನಲಾಗಿದೆ. ಆದರೆ ಸಮರ್ಪಕ ದಾಖಲೆಗಳನ್ನು ನೀಡಲು ಸಾಧ್ಯವಾಗದೇ ರಾಯ್ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಮೂಲಗಳು ಸೂಚಿಸಿವೆ. ಈ ಆರ್ಥಿಕ ಒತ್ತಡವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಇದರ ಜೊತೆಗೆ, ರಾಯ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಕೆಲವು ಸಮಯದಿಂದ ಕೌನ್ಸೆಲಿಂಗ್ ಪಡೆಯುತ್ತಿದ್ದರು ಎನ್ನಲಾಗುತ್ತಿದೆ. ವಿಚಾರಣೆಯ ಮುನ್ನದ ದಿನ ಮಾನಸಿಕ ಒತ್ತಡ ಕಡಿಮೆ ಮಾಡಲು ಮಾತ್ರೆಗಳು ಸೇವಿಸಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.
ವಿಚಾರಣೆ ದಿನ 500 ಕೋಟಿ ರೂ. ಅಕ್ರಮ ಹಣದ ಕುರಿತು ಸ್ಪಷ್ಟನೆ ನೀಡಲು ಸಾಧ್ಯವಾಗದೇ ತೀವ್ರ ಒತ್ತಡಕ್ಕೆ ಒಳಗಾಗಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದಲ್ಲದೆ, ಕಚೇರಿಗೆ ಮುನ್ನ ಅವರು ತಂಗಿದ್ದ ಖಾಸಗಿ ಹೋಟೆಲ್ ಕೊಠಡಿಯಲ್ಲೂ ಜೀವಂತ ಗುಂಡುಗಳು ಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ. ಹೋಟೆಲ್‌ನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆಯೇ ಎಂಬ ಕೋಣೆಯಲ್ಲೂ SIT ತನಿಖೆ ಮುಂದುವರಿಸಿದೆ. ಪ್ರಕರಣದ ಸತ್ಯಾಸತ್ಯತೆ SIT ತನಿಖೆಯ ನಂತರವೇ ಸ್ಪಷ್ಟವಾಗಲಿದೆ.

