ಬೆಂಗಳೂರು: ಕರ್ನಾಟಕ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇತ್ತೀಚೆಗೆ ತಾವು ಮಾಡಿದ್ದ ಟ್ವೀಟ್ ಕುರಿತು ಉಂಟಾದ ಚರ್ಚೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.
“ನಾನು ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ಟ್ವೀಟ್ ಮಾಡಿದ್ದೆ. ಆದರೆ ಅದನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ,” ಎಂದು ಡಿಸಿಎಂ ಹೇಳಿದರು.
ಕಾವೇರಿ ಆರತಿ ವಿಚಾರವಾಗಿ ಮಾತನಾಡಿದ ಅವರು, “ನನ್ನ ಪ್ರಾರ್ಥನೆಗೆ ನ್ಯಾಯಾಲಯ ಹೊಸ ರೂಪ ನೀಡಿದೆ. ಕೇಂದ್ರ ಸರ್ಕಾರಕ್ಕೆ ನೇರವಾಗಿ ಸೂಚನೆ ನೀಡಿದ್ದು, ಇದು ಟೆಕ್ನಿಕಲ್ ಆಗಿ ಅವರು ತೆಗೆದುಕೊಳ್ಳಬೇಕಾದ ತೀರ್ಮಾನವಾಗಿದೆ. ಮೇಕೆದಾಟು ಯೋಜನೆ ವಿಚಾರದಲ್ಲಿಯೂ ಕೇಂದ್ರವೇ ನಿರ್ಧಾರ ತೆಗೆದುಕೊಳ್ಳಬೇಕೆಂದು ಮಾರ್ಗದರ್ಶನ ನೀಡಲಾಗಿದೆ,” ಎಂದು ತಿಳಿಸಿದರು.
“ಈ ಎಲ್ಲ ವಿಚಾರಗಳಲ್ಲಿ ದೇವರು ನನಗೆ ವರ ಕೊಟ್ಟಿದ್ದಾನೆ ಅನ್ನೋ ಭಾವನೆಯಿಂದಲೇ ನಾನು ಆ ಟ್ವೀಟ್ ಮಾಡಿದ್ದೆ. ನೀವು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದೀರಾ. ಆದರೂ ಚಿಂತೆಯಿಲ್ಲ,” ಎಂದರು.
ಇದೇ ವೇಳೆ, “ಹಳ್ಳಿ ರೈತರ ಸುಗ್ಗಿ, ಅವರ ಬದುಕು ಯಾವತ್ತೂ ತುಂಬು ಬದುಕಾಗಲಿ ಎಂದು ಪಕ್ಷದ ಪರವಾಗಿ ಹಾರೈಸುತ್ತೇನೆ,” ಎಂದು ಸಂಕ್ರಾಂತಿ ಸಂದೇಶ ನೀಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಕುರಿತು
“ಅದು ನನ್ನ ಡ್ಯೂಟಿ ಬಂದಾಗ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಪ್ರೋಟೋಕಾಲ್ ಇದೆ. ರಿಸೀವ್ ಮಾಡೋದು, ಭೇಟಿ ಮಾಡೋದು ಎಲ್ಲವೂ ಪ್ರೋಟೋಕಾಲ್ ಪ್ರಕಾರವೇ ನಡೆಯುತ್ತದೆ,” ಎಂದು ಡಿಕೆಶಿ ಹೇಳಿದರು.
ರಾಹುಲ್ ಗಾಂಧಿ ಜೊತೆ ಪ್ರತ್ಯೇಕ ಮಾತುಕತೆ ವಿಚಾರ
“ಅದೆಲ್ಲ ನಿಮ್ಮ ಮುಂದೆ ಚರ್ಚೆ ಮಾಡೋಕೆ ಆಗಲ್ಲ. ನಾನು ಮಾತನಾಡಿಲ್ಲ ಅಂತ ನಾನು ಹೇಳಿಲ್ಲ. ಅದು ನಮಗೆ ಬಿಟ್ಟದ್ದು, ಅವರಿಗೆ ಬಿಟ್ಟದ್ದು,” ಎಂದು ಡಿಸಿಎಂ ಪ್ರತಿಕ್ರಿಯೆ ನೀಡಿದರು.

