ಬೆಂಗಳೂರು, ಫೆಬ್ರವರಿ 24: ಮೊದಲ ಬಾರಿ ಗೆದ್ದ ಶಾಸಕರಿಂದ ಸಚಿವ ಸ್ಥಾನ ಕೋರಿ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ D. K. Shivakumar ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲ ಬಾರಿ ಗೆದ್ದ ಶಾಸಕರ ಪತ್ರ ವಿಚಾರ
ಈ ಬಗ್ಗೆ ಮಾತನಾಡಿದ ಡಿಸಿಎಂ, “ಪೇಪರ್‌ನಲ್ಲಿ ನೋಡಿದ್ದೇನೆ ಅಷ್ಟೇ. ನನಗೆ ಇನ್ನೂ ಯಾವುದೇ ಪತ್ರ ತಲುಪಿಲ್ಲ. ಎಲ್ಲರಿಗೂ ಮಂತ್ರಿಯಾಗಬೇಕು ಎಂಬ ಆಸೆ ಇರುತ್ತದೆ ಅಲ್ವಾ?” ಎಂದು ಹೇಳಿದರು.
“Narendra Modi ಅವರು ಎಂಎಲ್ಎ ಆಗಿರಲಿಲ್ಲ, ಆದರೆ ಸಿಎಂ ಆಗಿದ್ದರು. ಸಿಎಂ ಆಗದೇ ಇದ್ದರೂ ಮಂತ್ರಿಯಾದವರು ಇದ್ದಾರೆ. ಎಂಎಲ್ಎ ಆಗದೇ ಇದ್ದರೂ ಮಂತ್ರಿಯಾದವರೂ ಇದ್ದಾರೆ. ಆದ್ದರಿಂದ ಅವರು ಕೇಳುವುದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದರು.
ಹೊಸ MLAಗಳಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆ
ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡುವುದರಲ್ಲಿ ತಪ್ಪೇನಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, “ನೋಡಪ್ಪ, ನಾನು ಕೂಡ ಮೊದಲ ಬಾರಿ ಮಂತ್ರಿಯಾದವನು. ಹೊಸ ಪೀಳಿಗೆ ಬೆಳೆಯಬೇಕು ಅಲ್ವಾ? ಎಷ್ಟು ದಿನ ನಾವೇ ಗೂಟ ಹೊಡೆದು ಕುಳಿತುಕೊಳ್ಳಲು ಆಗುತ್ತೆ?” ಎಂದರು.
“ನಾನು ಮಂತ್ರಿಯಾಗಿ 36 ವರ್ಷ ಆಯಿತು. ಹೊಸ ಜನರೇಷನ್ ಬರಬೇಕು, ಹೊಸ ಆಲೋಚನೆಗಳು ಬರಬೇಕು. ಹೊಸಬರಿಗೆ ಪ್ರೇರೇಪಣೆ ನೀಡಬೇಕು. ಅವರನ್ನು ತಯಾರಿಸಬೇಕು. ಅವರು ಕೇಳುವುದರಲ್ಲಿ ತಪ್ಪೇನಿಲ್ಲ. ಅಂತಿಮ ತೀರ್ಮಾನವನ್ನು ಪಕ್ಷದ ನಾಯಕತ್ವವೇ ಮಾಡುತ್ತದೆ,” ಎಂದು ಸ್ಪಷ್ಟಪಡಿಸಿದರು.
ಮಂತ್ರಿಮಂಡಲ ವಿಸ್ತರಣೆ ಕುರಿತ ಪ್ರಶ್ನೆ
ಹೊಸ ಶಾಸಕರು ಮಂತ್ರಿಮಂಡಲ ಸೇರುವ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆಗೆ, “ನಾನು ಮಂತ್ರಿಮಂಡಲ ಮಾಡುತ್ತೇನೆ ಎಂದು ಹೇಳಿಲ್ಲ. ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಕೆಲವರು ಅದಕ್ಕಾಗಿ ದೆಹಲಿಗೆ ಹೋಗುತ್ತಾರೆ, ಕೆಲವರು ಪತ್ರ ಬರೆಯುತ್ತಾರೆ, ಇನ್ನೂ ಕೆಲವರು ಹೊರಗಡೆ ಹೋಗಿ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಾರೆ. ಅವರ ಆಸೆ ಸಹಜ,” ಎಂದು ಹೇಳಿದರು.
ದೆಹಲಿಗೆ ತೆರಳುವ ವಿಚಾರ
ದೆಹಲಿಗೆ ತೆರಳುವ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, “ಸದ್ಯಕ್ಕೆ ನಾನು ಕುಮಾರಕೃಪಾ ಮನೆಯಲ್ಲಿ ಇದ್ದೇನೆ,” ಎಂದು ತಿಳಿಸಿದರು.

