ನವದೆಹಲಿ, ಮಾ.12: ದೇಶದಲ್ಲಿ ವಾಣಿಜ್ಯ ಎಲ್‌ಪಿಜಿ ಕೊರತೆಯಿಂದ ಹಲವೆಡೆ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸಂಕಷ್ಟ ಎದುರಿಸುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಜನರಿಗೆ ಸ್ವಲ್ಪ ನೆಮ್ಮದಿ ನೀಡುವ ಮಾಹಿತಿ ನೀಡಿದೆ. ದೇಶೀಯ ಅಡುಗೆ ಅನಿಲ ಉತ್ಪಾದನೆಯನ್ನು ಶೇಕಡಾ 25ರಷ್ಟು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರ್ಕೆಟಿಂಗ್ ಮತ್ತು ರಿಫೈನರಿ) ಸುಜಾತಾ ಶರ್ಮಾ ಮಾತನಾಡಿ, “ಭಾರತವು ತನ್ನ ಎಲ್‌ಪಿಜಿ ಅಗತ್ಯದ ಸುಮಾರು ಶೇ.60ರಷ್ಟು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇ.90ರಷ್ಟು ಪೂರೈಕೆ ಹೊರ್ಮುಜ್ ಜಲಸಂಧಿ ಮಾರ್ಗದ ಮೂಲಕ ಬರುತ್ತಿತ್ತು. ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯಿಂದ ಆ ಮಾರ್ಗ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದು, ಈ ಹಿನ್ನೆಲೆ ದೇಶೀಯ ಉತ್ಪಾದನೆ ಹೆಚ್ಚಿಸಲು ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ ಸಂಸ್ಕರಣಾಗಾರಗಳು ಉತ್ಪಾದನೆಯನ್ನು ಶೇ.25ರಷ್ಟು ಹೆಚ್ಚಿಸಿವೆ” ಎಂದು ಹೇಳಿದರು.
ಜನರಲ್ಲಿ ಉಂಟಾಗಿರುವ ಭೀತಿಯಿಂದ ಅನಗತ್ಯವಾಗಿ ಸಿಲಿಂಡರ್ ಬುಕ್ಕಿಂಗ್ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ಇದರಿಂದ ಕೊರತೆ ಇನ್ನಷ್ಟು ತೀವ್ರವಾಗಿ ಕಾಣುತ್ತಿದೆ. ಆದ್ದರಿಂದ ಜನರು ಆತಂಕದಿಂದ ಬುಕ್ಕಿಂಗ್ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಎಲ್‌ಪಿಜಿ ವಿತರಣೆಯಲ್ಲಿ ಅನಿಯಂತ್ರಿತ ತಿರುಗಾಟವಾಗದಂತೆ ತಡೆಯಲು ‘ಒನ್ ಟೈಮ್ ಡೆಲಿವರಿ ಕೋಡ್’ (OTDC) ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದೇವೆ. ಜೊತೆಗೆ ಸಿಲಿಂಡರ್ ಮರುಬುಕ್ಕಿಂಗ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಪರಿಸ್ಥಿತಿಯನ್ನು ನಿಗಾ ವಹಿಸಲು ಹಾಗೂ ಅಗತ್ಯವಿದ್ದರೆ ಸರಿಯಾದ ವಿತರಣಾ ಯೋಜನೆ ರೂಪಿಸಲು ವಿಶೇಷ ಸಮಿತಿಯನ್ನೂ ನೇಮಕ ಮಾಡಲಾಗಿದೆ.
ಇದೇ ವೇಳೆ ಕಚ್ಚಾ ತೈಲ ಪೂರೈಕೆಯ ಬಗ್ಗೆ ಕೂಡ ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ದೇಶಕ್ಕೆ ದಿನಕ್ಕೆ ಬೇಕಾಗುವ 5.5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲಕ್ಕಿಂತ ಹೆಚ್ಚು ಪೂರೈಕೆ ಲಭ್ಯವಾಗುತ್ತಿದೆ. ಪ್ರಸ್ತುತ 40ಕ್ಕೂ ಹೆಚ್ಚು ದೇಶಗಳಿಂದ ತೈಲ ಆಮದು ಮಾಡಿಕೊಳ್ಳಲಾಗುತ್ತಿದ್ದು, ಸಂಸ್ಕರಣಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ–ಇಸ್ರೇಲ್ ನಡುವಿನ ಸಂಘರ್ಷದಿಂದ ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹೊರ್ಮುಜ್ ಜಲಸಂಧಿ ತಾತ್ಕಾಲಿಕವಾಗಿ ಬಂದ್ ಆಗಿರುವ ಪರಿಣಾಮ ಭಾರತ ಸೇರಿದಂತೆ ಹಲವು ದೇಶಗಳಿಗೆ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಕೆಲವು ಮೆಟ್ರೋ ನಗರಗಳ ಹೋಟೆಲ್‌ಗಳು ಗ್ಯಾಸ್ ಕೊರತೆಯಿಂದ ಕಟ್ಟಿಗೆ ಮತ್ತು ಕಲ್ಲಿದ್ದಲು ಒಲೆಗಳನ್ನು ಬಳಸುವ ಪರಿಸ್ಥಿತಿ ಎದುರಿಸುತ್ತಿವೆ.
ಭಾರತವು ತನ್ನ ಒಟ್ಟು ಎಲ್‌ಪಿಜಿ ಅಗತ್ಯದ ಸುಮಾರು ಶೇ.62ರಷ್ಟು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಹೆಚ್ಚಿನ ಪಾಲನ್ನು ಕತಾರ್, ಯುಎಇ, ಸೌದಿ ಅರೇಬಿಯಾ ಮತ್ತು ಕುವೈತ್‌ನಂತಹ ಮಧ್ಯಪ್ರಾಚ್ಯ ರಾಷ್ಟ್ರಗಳು ಪೂರೈಸುತ್ತಿವೆ.

