– ಅಪರಾಧ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮೊದಲ ಅಮೆರಿಕ ಮಾಜಿ ಅಧ್ಯಕ್ಷ
ನ್ಯೂಯಾರ್ಕ್: ಹಷ್ ಮನಿ (Hush Money Case) ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ದೋಷಿ ಎಂದು ನ್ಯೂಯಾರ್ಕ್ ನ್ಯಾಯಾಲಯ ಘೋಷಿಸಿದೆ. ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾದ ಮೊದಲ ಯುಎಸ್ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಟ್ರಂಪ್ ಒಳಗಾಗಿದ್ದಾರೆ.
ಹಣಕಾಸು ಅವ್ಯವಹಾರ ಸೇರಿ 34 ಪ್ರಕರಣಗಳಲ್ಲಿ ಟ್ರಂಪ್ ದೋಷಿ ಎಂದು ನ್ಯೂಯಾರ್ಕ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಜಾಮೀನು ಇಲ್ಲದೇ ಬಿಡುಗಡೆಯಾಗಿದ್ದ ಟ್ರಂಪ್ ಈಗ ಅಪರಾಧಿಯಾಗಿದ್ದಾರೆ. ದಾಖಲೆಗಳನ್ನು ತಿದ್ದಿದ ಎಲ್ಲಾ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದಾರೆ.

ಜೊತೆಗೆ ಅವರು ಸ್ಟಾರ್ಮಿ ಡೇನಿಯಲ್ಸ್ (Stormy Daniels) ಜತೆಗಿನ ಸಂಬಂಧವನ್ನು ಕೂಡ ನಿರಾಕರಿಸಿದ್ದಾರೆ. ನ್ಯಾ. ಜುವಾನ್ ಮಾರ್ಚೆನ್ ಜುಲೈ 11ರಂದು ಶಿಕ್ಷೆ ಪ್ರಕಟಿಸಲಿದ್ದಾರೆ. ಜುಲೈ 15ರಂದು ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶ ಪ್ರಾರಂಭವಾಗಲಿರುವ ಸಮಯದಲ್ಲಿ ಟ್ರಂಪ್ ವಿರುದ್ಧ ನಿರ್ಧಾರ ಪ್ರಕಟವಾಗುತ್ತದೆ. ಇದರಲ್ಲಿ ಟ್ರಂಪ್ ಹೆಸರನ್ನು ಪಕ್ಷವು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಔಪಚಾರಿಕವಾಗಿ ಘೋಷಿಸುತ್ತದೆ.
ಟ್ರಂಪ್ ಅವರು ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ ಹಣ ಪಾವತಿಸಿದ ಆರೋಪಕ್ಕೆ ಸಂಬಂಧಿಸಿ ‘ಹಷ್ ಮನಿ’ ಪ್ರಕರಣದಲ್ಲಿ ಕಾನೂನು ಸಂಕಷ್ಟ ಎದುರಿಸುತ್ತಿದ್ದರು. ಸ್ಟಾರ್ಮಿ ಜೊತೆಗೆ 2006 ರಲ್ಲಿ ಟ್ರಂಪ್ ಲೈಂಗಿಕ ಸಂಬಂಧ ಹೊಂದಿದ್ದರು. ಈ ಸಂಬಂಧ ಮೌನವಾಗಿರಲು ಸ್ಟಾರ್ಮಿ ಅವರಿಗೆ ಟ್ರಂಪ್ ತಮ್ಮ ವಕೀಲರ ಮೂಲಕ ಹಣ ನೀಡಿದ್ದರು ಎಂಬ ಆರೋಪ ಇತ್ತು. ಈ ಸಂಬಂಧ ವಿಚಾರಣೆ ಮಾಜಿ ಅಧ್ಯಕ್ಷ ಎದುರಿಸುತ್ತಿದ್ದರು. 2016 ರ ಅಧ್ಯಕ್ಷೀಯ ಚುನಾವಣೆ ಮೇಲೆ ಈ ಪ್ರಕರಣ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ನಟಿಗೆ ಟ್ರಂಪ್ ಹಣ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಈ ಆರೋಪಗಳನ್ನು ಅವರು ನಿರಾಕರಿಸಿದ್ದರು.

