ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಿಂಧೆ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಸಲ್ಲಿಸಿದರು.ಶಿಂಧೆ ಅವರೊಂದಿಗೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್ ಕೂಡ ಉಪಸ್ಥಿತರಿದ್ದರು.
ಇದರೊಂದಿಗೆ ಅವರ ಇಡೀ ಸಂಪುಟ ಕೂಡ ರಾಜೀನಾಮೆ ಸಲ್ಲಿಸಿದೆ. ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರು ಮುಂದಿನ ಸರ್ಕಾರ ರಚನೆಯಾಗುವವರೆಗೂ ತಮ್ಮ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿಯ ಮಹಾಮೈತ್ರಿಕೂಟವು ಭಾರಿ ಬಹುಮತವನ್ನು ಸಾಧಿಸಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ನೂತನ ಮುಖ್ಯಮಂತ್ರಿ ಯಾರೆಂಬ ಕುತೂಹಲ ಮನೆಮಾಡಿದೆ.
ಮಹಾರಾಷ್ಟ್ರ ಸಿಎಂ ರಾಜೀನಾಮೆಯೊಂದಿಗೆ ನೂತನ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯೂ ಅಂತ್ಯಗೊಂಡಿದೆ. ಇದೀಗ ಮಂಗಳವಾರದಂದು ಉದ್ದೇಶಿತ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಇಂದು ನೂತನ ಸಿಎಂ ಹೆಸರನ್ನು ಕೂಡ ಘೋಷಿಸಲಾಗುವುದು ಎನ್ನಲಾಗಿದೆ. ಮೂಲಗಳ ಪ್ರಕಾರ ದೇವೇಂದ್ರ ಫಡ್ನವೀಸ್ ನೂತನ ಸಿಎಂ ಆಗುವುದು ಖಚಿತ ಎಂದು ಪರಿಗಣಿಸಲಾಗಿದೆ.

