ಮುಂಬೈ,ಜ.25- ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಅವರು ಸನ್ಯಾಸತ್ವ ಸ್ವೀಕಾರಿಸಿದ್ದಾರೆ. 90ರ ದಶಕದಲ್ಲಿ ಹುಡಗರ ಮನ ಕದಡಿದ್ದ ಮಮತಾ ಈಗ ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಆಗಿ ನೇಮಕಗೊಂಡಿದ್ದಾರೆ. ಇನುಂದೆ ಅವರನ್ನು ಯಾಮೈ ಮಮತಾ ನಂದಗಿರಿ ಎನ್ನುವ ಹೆಸರಿಂದ ಗುರುತಿಸಲಾಗುತ್ತದೆ.
ಮಹಾಂಡಲೇಶ್ವರ ಆಚಾರ್ಯ ನಾರಾಯಣ ತ್ರಿಪಾಠಿ ಮಾತನಾಡಿ, ಮಮತ ಕುಲಕರ್ಣಿ ಅವರು ಕಳೆದ 10 ವರ್ಷಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಸನಾತನ ಧರ್ಮಕ್ಕೆ ತಕ್ಕಂತೆ ಇರುವುದು ಅವರಿಗೆ ತಿಳಿದಿದೆ. ಧರ್ಮ ವಿಚಾರದಲ್ಲಿ ಬದ್ಧವಾಗಿದ್ದಾರೆ ಎಂದು ತಿಳಿಸಿದ್ದಾರೆ.
ವಿಕಿ ಗೋಸ್ವಾಮಿ ಎಂಬುವರ ಜೊತೆ ಮದುವೆಯಾಗಿದ್ದ ಮಮತಾ ಕೆಲವು ವರ್ಷಗಳ ಕಾಲ ಆಫ್ರಿಕಾದಲ್ಲಿ ನೆಲೆಸಿದ್ದರು. 2000 ಕೋಟಿ ಹಣದ ಡ್ರಗ್ಸ್ ಪ್ರಕರಣದಲ್ಲಿ ಮಮತಾ ಕುಲಕರ್ಣಿಯರ ಹೆಸರು ಕೇಳಿ ಬಂದಿತ್ತು. ಈ ಮಾದಕ ವಸ್ತು ಪ್ರಕರಣ ಸಂಬಂಧ ಅಮೆರಿಕದ ತನಿಖಾ ಸಂಸ್ಥೆಯ ತನಿಖೆಗೂ ನಟಿ ಹಾಜರಾಗಿದ್ದರು.
2000ದಿಂದ ಇಲ್ಲಿವರೆಗೆ ಅಂದರೆ 25 ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದ್ದರು. 2012ರಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಲು ಭಾರತಕ್ಕೆ ಬಂದ ಅವರು ಮತ್ತೆ ವಿದೇಶಕ್ಕೆ ಮರಳಿದ್ದರು. ಈಗ ಮತ್ತೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ 2025ರ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ.
ಮಮತಾ ಕುಲಕರ್ಣಿ ಅವರು 2024ರ ಡಿಸೆಂಬರ್‌ನಲ್ಲಿ ವಿದೇಶದಿಂದ ಭಾರತಕ್ಕೆ ವಾಪಸ್ ಆಗಿದ್ದರು. ನಾನು 25 ವರ್ಷಗಳ ನಂತರ ತಾಯಿನಾಡಿಗೆ ಬಂದಿದ್ದೇನೆ. 12 ವರ್ಷಗಳ ಬಳಿಕ ಮತ್ತೊಂದು ಮಹಾ ಕುಂಭಮೇಳಕ್ಕೆ ಬಂದಿರುವುದು ಸಂತಸ ತಂದಿದೆ ಎಂದಿದ್ದಾರೆ.ಸದ್ಯ ಮಮತಾ ಕುಲಕರ್ಣಿ ಅವರು ಮಹಾಕುಂಭಮೇಳದಲ್ಲಿ ಆಧ್ಯಾತಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.
ನಾನು ಭಾರತವನ್ನು ಬಿಡಲು ಕಾರಣ ಆಧ್ಯಾತ್ಮ . ಆಧ್ಯಾತದ ನನ್ನನ್ನು ಗುರು ಗಗನ್ ಗಿರಿ ಮಹಾರಾಜ್ ಅವರನ್ನು ಭೇಟಿಯಾಗುವಂತೆ ಮಾಡಿತು. ಅವರ ಮಾರ್ಗದರ್ಶನದಿಂದ ಆಧ್ಯಾತದಲ್ಲಿನ ನನ್ನ ಆಸಕ್ತಿ ಮತ್ತಷ್ಟು ಹೆಚ್ಚಾಯಿತು ಎಂದು ಮಮತಾ ಹೇಳಿದ್ದಾರೆ.
ಅವರ ಕೊನೆಯ ಯಶಸ್ವಿ ಚಿತ್ರ ಛುಪಾ ರುಸ್ತಮ್, ಎ ಮ್ಯೂಸಿಕಲ್ ಥ್ರಿಲ್ಲರ್ (2001). 2002 ರ ಕಭಿ ತುಮ್ ಕಭಿ ಹಮ್ ಚಿತ್ರದ ನಂತರ ಅವರು ನಟನೆಯಿಂದ ದೂರ ಉಳಿದಿದ್ದರು. ಕನ್ನಡ, ತಮಿಳು, ತೆಲುಗು, ಬಂಗಾಳಿ ಮತ್ತು ಮಲಯಾಳಂ ಭಾಷೆಗಳಲ್ಲೂ ಕೂಡ ನಟಿಸಿದ್ದಾರೆ.
ಏಪ್ರಿಲ್ 20, 1972ರಂದು ಮಹಾರಾಷ್ಟ್ರದ (ಭಾರತ) ಮುಂಬೈನಲ್ಲಿ ಜನಿಸಿದ ಮಮತಾ ಕುಲಕರ್ಣಿ, ಹಿಂದಿ, ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದು, ಅವರ ಮೊದಲ ಚಿತ್ರ ತಿರಂಗಾ ಮತ್ತು ಆ ನಂತರ ಅವರು ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು. 1996ರಿಂದ ಅವರ ಆಸಕ್ತಿ ಆಧಾತಿಕತೆ ಕಡೆಗೆ ತಿರುಗಿ ಇಂದು ಸನ್ಯಾಸ ಸ್ವೀಕರಿಸಿದ್ದಾರೆ.

