ಉಗ್ರನಿಗೆ ಥ್ಯಾಂಕ್ಸ್ ಹೇಳಿದ್ದರಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್..!
ನವದೆಹಲಿ: ಲಷ್ಕರ್-ಎ-ತೈಬಾ ಸಂಸ್ಥಾಪಕ ಮತ್ತು 26/11 ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನನ್ನು ಭೇಟಿಯಾದ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವೈಯಕ್ತಿಕವಾಗಿ ತನಗೆ ಧನ್ಯವಾದ ಹೇಳಿದ್ದರು ಎಂದು ಭಯೋತ್ಪಾದಕ ಯಾಸಿನ್ ಮಲಿಕ್ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾನೆ.
ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದಾನೆ.
ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸದ್ಯ ತಿಹಾರ್ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (JKLF) ಭಯೋತ್ಪಾದಕ ಯಾಸಿನ್ ಮಲಿಕ್ 2006 ರಲ್ಲಿ ಪಾಕಿಸ್ತಾನದಲ್ಲಿ ಹಫೀಜ್ ಸಯೀದ್‌ನನ್ನು ಭೇಟಿಯಾಗಿದ್ದ.
ಹಫೀಜ್ ಸಯೀದ್ ಭೇಟಿಯ ಬಳಿಕ ಮನಮೋಹನ್ ಸಿಂಗ್ ಅವರು ನನಗೆ ವೈಯಕ್ತಿಕವಾಗಿ ಧನ್ಯವಾದ ಹೇಳಿದ್ದರು ಎಂದು ಯಾಸಿನ್ ಮಲಿಕ್ ಆಗಸ್ಟ್ 25 ರಂದು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾನೆ. ಈ ಭೇಟಿಯನ್ನು ನಾನು ನಿಗದಿ ಮಾಡಿರಲಿಲ್ಲ. ಬದಲಾಗಿ ಹಿರಿಯ ಭಾರತೀಯ ಗುಪ್ತಚರ ಅಧಿಕಾರಿಗಳ ಕೋರಿಕೆಯ ಮೇರೆಗೆ ಉಗ್ರರ ಜೊತೆ ಸಭೆ ಮಾಡಿದ್ದೆ ಎಂದು ತಿಳಿಸಿದ್ದಾನೆ.
ಪತ್ರದಲ್ಲೇನಿದೆ..?
2005 ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ. ಈ ಭೇಟಿಗೂ ಮೊದಲು ಆಗಿನ ಗುಪ್ತಚರ ದಳದ (ಐಬಿ) ವಿಶೇಷ ನಿರ್ದೇಶಕ ವಿ.ಕೆ. ಜೋಶಿ ಅವರು ದೆಹಲಿಯಲ್ಲಿ ನನ್ನನ್ನು ಭೇಟಿ ಮಾಡಿದ್ದರು.
ಈ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನ ರಾಜಕೀಯ ನಾಯಕರನ್ನು ಮಾತ್ರವಲ್ಲದೇ ಉಗ್ರ ಸಂಘಟನೆಗಳ ಜೊತೆ ಮಾತನಾಡಿ ಶಾಂತಿಗೆ ಸಹಕಾರ ನೀಡುವಂತೆ ಕೇಳಿಕೊಳ್ಳಬೇಕು ಎಂದು ಅವರು ನನ್ನ ಜೊತೆ ವಿನಂತಿ ಮಾಡಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ಅವರ ಶಾಂತಿ ಪ್ರಯತ್ನದ ಭಾಗವಾಗಿ ಈ ಕೆಲಸ ಮಾಡಬೇಕು ಎಂದು ಕೇಳಿಕೊಂಡಿದ್ದರು. ಇದನ್ನೂ ಓದಿ: ಭಾರತದ ಸಿಂಧೂರ ದಾಳಿಗೆ ಮಸೂದ್ ಕುಟುಂಬ ಕಳೆದುಕೊಂಡ – ಪಾಕ್ ಉಗ್ರ ಇಲ್ಯಾಸ್ ಸಾಕ್ಷ್ಯ
ಮಾತುಕತೆಯ ವೇಳೆ ಭಯೋತ್ಪಾದಕ ನಾಯಕರ ಜೊತೆ ಮಾತುಕತೆ ನಡೆಸದ ಹೊರತು ಶಾಂತಿ ಮಾತುಕತೆ ಪೂರ್ಣವಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೆ. ಸರ್ಕಾರದ ವಿನಂತಿಯ ಮೇರೆಗೆ ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯೀದ್ ಮತ್ತು ಯುನೈಟೆಡ್ ಜಿಹಾದ್ ಕೌನ್ಸಿಲ್‌ನ ಇತರ ನಾಯಕರನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದೆ.
ಉಗ್ರರ ಜೊತೆ ಸಭೆ ನಡೆಸಿ ನಾನು ಫೆಬ್ರವರಿ, 2006 ರಲ್ಲಿ ಭಾರತಕ್ಕೆ ಮರಳಿದೆ. ಮರಳಿದ ಬಳಿಕ ಐಬಿ ವಿಶೇಷ ನಿರ್ದೇಶಕ ವಿ ಕೆ ಜೋಶಿ ಅವರು ಮಾತುಕತೆಯ ಭಾಗವಾಗಿ ಹೋಟೆಲ್‌ನಲ್ಲಿ ನನ್ನನ್ನು ಭೇಟಿಯಾಗಿ ಪ್ರಧಾನಿಗೆ ತಕ್ಷಣ ವಿವರಿಸುವಂತೆ ವಿನಂತಿಸಿದರು. ಅಂದು ಸಂಜೆ ನಾನು ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರ ಸಮ್ಮುಖದಲ್ಲಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದೆ.

