ಬಾಗಲಕೋಟೆ: ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಸಮೀಪದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಗುರುವಾರ ರಾತ್ರಿ ನಡೆದಿದೆ.
ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ, ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನಿಗೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕಾರ್ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ನಾಲ್ವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಮೃತಪಟ್ಟವರನ್ನು ವಿಶ್ವನಾಥ ಕಂಬಾರ (17), ಗಣೇಶ ಅರಳಿಮಟ್ಟಿ (20), ಪ್ರವೀಣ್ ಶೇಡಬಾಳ (22), ಪ್ರಜ್ವಲ್ ಶೇಡಬಾಳ (17) ಎಂದು ಗುರುತಿಸಲಾಗಿದ್ದು ಎಲ್ಲರೂ ಸಿದ್ದಾಪುರ ಗ್ರಾಮದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾತ್ರಿ ಸಮಯದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ನಿಧಾನವಾಗಿ ಸಾಗುತ್ತಿದ್ದ ವೇಳೆ, ಹಿಂಬದಿಯಿಂದ ಬಂದ ಕಾರು ಟ್ರ್ಯಾಕ್ಟರ್‌ನ ಟ್ರಾಲಿಗೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರಿಗೆ ಗಂಭೀರ ತಲೆ ಮತ್ತು ದೇಹ ಗಾಯಗಳಾಗಿವೆ. ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವುದಾಗಿ ದೃಢಪಟ್ಟಿದೆ.
ಘಟನೆಯ ನಂತರ ಜಮಖಂಡಿ ಪೊಲೀಸ್ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ. ಒಂದೇ ಊರಿನ ನಾಲ್ವರು ಯುವಕರ ದಾರುಣ ಸಾವು ಸ್ಥಳೀಯ ಪ್ರದೇಶದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಶೋಕವಿವಶರಾಗಿದ್ದಾರೆ.

