ಕಲಬುರಗಿ, ಫೆಬ್ರವರಿ 11: ಆಫಜಲಪುರ ಕಾಂಗ್ರೆಸ್ ಶಾಸಕ ಎಂವೈ ಪಾಟೀಲ್ ಅವರ ಆಪ್ತರಾಗಿರುವ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಮದುವೆ ಸಮಾರಂಭವೊಂದರಲ್ಲಿ ಗನ್ ತೋರಿಸಿ ನೃತ್ಯ ಮಾಡಿದ ವೀಡಿಯೋ ವೈರಲ್ ಆದ ಬೆನ್ನಲ್ಲೇ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇತ್ತೀಚೆಗೆ ಕಲಬುರಗಿ ನಗರದಲ್ಲಿ ನಡೆದ ತಮ್ಮ ತಂಗಿಯ ಮಗಳ ಮದುವೆ ಪೂರ್ವ ಕಾರ್ಯಕ್ರಮದಲ್ಲಿ ಮತೀನ್ ಪಟೇಲ್ ಗನ್ ಹಿಡಿದು ವೇದಿಕೆಯ ಮೇಲೆ ಡ್ಯಾನ್ಸ್ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಕಾರ್ಯಕ್ರಮದಲ್ಲಿ ಅನೇಕ ಅತಿಥಿಗಳು ಉಪಸ್ಥಿತರಿದ್ದ ವೇಳೆ ಸಂಗೀತದ ಮಧ್ಯೆ ಗನ್ ಪ್ರದರ್ಶಿಸಿ ಕುಣಿದಿರುವುದು ಹಾಗೂ ಕೆಲವರು ಅವರೊಂದಿಗೆ ಫೋಟೋ, ವೀಡಿಯೋ ತೆಗೆದುಕೊಂಡಿರುವುದು ಗಮನಸೆಳೆದಿದೆ.
ಜನಸಂದಣಿಯ ಮದುವೆ ಸಮಾರಂಭದಲ್ಲಿ ಸಾರ್ವಜನಿಕವಾಗಿ ಶಸ್ತ್ರಾಸ್ತ್ರ ಪ್ರದರ್ಶನ ಮಾಡಿರುವುದು ಗಂಭೀರ ವಿಷಯವೆಂದು ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. “ಸಾರ್ವಜನಿಕವಾಗಿ ಶಸ್ತ್ರಾಸ್ತ್ರ ಪ್ರದರ್ಶಿಸುವುದು ಅಪರಾಧ. ಘಟನೆ ಎಲ್ಲಿ, ಯಾವ ಸಂದರ್ಭಗಳಲ್ಲಿ ನಡೆದಿದೆ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ. ಸುಮೋಟೋ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ತಿಳಿಸಿದ್ದಾರೆ.
ಇನ್ನೊಂದೆಡೆ, ಮತೀನ್ ಪಟೇಲ್ ಅಫಜಲಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರಾಗಿದ್ದು, ಶಾಸಕ ಎಂವೈ ಪಾಟೀಲ್ ಅವರ ಆಪ್ತರೆಂದು ಪರಿಚಿತರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಫಜಲಪುರ ಬಿಜೆಪಿ ನಾಯಕ ನಿತೀನ್ ವಿ. ಗುತ್ತೇದಾರ್, “ಶಾಸಕರು ನಕಲಿ ಗನ್ ಎಂದು ಹೇಳುತ್ತಿದ್ದಾರೆ. ಆದರೆ ಅದು ಅಸಲಿ ಗನ್. ಮತೀನ್ ತಮ್ಮ ಜೇಬಿನಿಂದಲೇ ಗನ್ ತೆಗೆದಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು,” ಎಂದು ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಗನ್ ನಕಲಿಯೋ ಅಸಲಿಯೋ ಎಂಬುದರ ಕುರಿತು ಪೊಲೀಸ್ ಇಲಾಖೆ ಸ್ಪಷ್ಟತೆ ನೀಡುವ ನಿರೀಕ್ಷೆಯಿದೆ.

