ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿರುವ ಪ್ರಕರಣ ಸಂಬಂಧ ಸರ್ಕಾರಕ್ಕೆ ಸಲ್ಲಿಸಿದ ನ್ಯಾ. ಮೈಕಲ್ ಕುನ್ಹಾ ಅವರ ವರದಿಯಲ್ಲಿ ಮತ್ತಷ್ಟು ಸ್ಫೋಟಕ ಅಂಶ ಬಹಿರಂಗವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಕರ್ತವ್ಯ ಲೋಪ ಮಾಡಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸು ಮಾಡಿದೆ. ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ಮತ್ತು ಪೊಲೀಸರ ವಿರುದ್ಧ ದಂಡನೀಯ ಪ್ರಕರಣ ದಾಖಲು ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಯೋಜನೆ, ಸಮನ್ವಯ ಮತ್ತು ಜನಸಂದಣಿ ನಿರ್ವಹಣೆಯಲ್ಲಿನ ಲೋಪಗಳ ತನಿಖೆಗಾಗಿ ರಚಿಸಲಾದ ಆಯೋಗವು ಒಂದು ತಿಂಗಳ ಕಾಲ ನಡೆದ ತನಿಖೆಯ ನಂತರ ವರದಿಯನ್ನು ಸಲ್ಲಿಸಿತು.
ವರದಿ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಯೋಗ ನೀಡಿದ ವರದಿಯನ್ನು ಜುಲೈ 17ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಚರ್ಚಿಸಿದ ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ವರದಿಯನ್ನು ವಿವರವಾಗಿ ಓದಿಲ್ಲ. ನ್ಯಾಯಮೂರ್ತಿಗಳು ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚಿಸಿದ ನಂತರ ಸಂಪುಟವೇ ಅಂತಿಮ ನಿರ್ಧಾರ ಮಾಡಲಿದೆ ಎಂದರು. ಕ್ರೀಡಾಂಗಣದ ಕಾಲ್ತುಳಿತದ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ಇನ್ನೂ ಮುಂದುವರೆದಿದೆ.
ಕಾಲ್ತುಳಿತದ ನಂತರ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣವನ್ನು ಈಗ ಕೇಂದ್ರ ತನಿಖಾ ಇಲಾಖೆಯ (ಸಿಐಡಿ) ಎಸ್‌ಐಟಿ ತನಿಖೆ ನಡೆಸುತ್ತಿದೆ. ನ್ಯಾಯಾಂಗ ಆಯೋಗದ ಜೊತೆಗೆ, ಮುಖ್ಯಮಂತ್ರಿಗಳು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದರು, ಆ ವರದಿಯನ್ನು ಇನ್ನೂ ಸಲ್ಲಿಸಲಾಗಿಲ್ಲ.
ಘಟನೆಯ ನಂತರ, ಪೊಲೀಸರು ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ನ ಮೂವರು ಕಾರ್ಯನಿರ್ವಾಹಕರನ್ನು ಬಂಧಿಸಿದರು, ಅವರೆಲ್ಲರೂ ಸದ್ಯ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ.
ಕರ್ತವ್ಯ ಲೋಪಕ್ಕಾಗಿ ಆಗಿನ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಸೇರಿದಂತೆ ಐದು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲು ಸಿಎಂ ಆದೇಶಿಸಿದ್ದರು. ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಜನರು ಮೃತಪಟ್ಟ ದಾರುಣ ಘಟನೆ ನಡೆದ ಬೆನ್ನಲ್ಲೇ, ಮಾಜಿಸ್ಟ್ರೀಯಲ್ ವಿಚಾರಣೆಗೆ ಆದೇಶಿಸಲಾಗಿತ್ತು.

