Sheikh Hasina : ಮಹತ್ವದ ಬೆಳವಣಿಗೆಯೊಂದರಲ್ಲಿ, ತಮ್ಮ ವಿರುದ್ಧ ಭುಗಿಲೆದಿದ್ದ ವಿದ್ಯಾರ್ಥಿ ಚಳುವಳಿಯನ್ನು ಹತ್ತಿಕ್ಕಲು ಹಿಂಸಾತ್ಮಕ ವಿಧಾನ ಅನುಸರಿಸಿದ ಆರೋಪದ ಮೇಲೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನ್ಯಾಯಾಲವು ಮರಣದಂಡನೆ ಶಿಕ್ಷೆ ವಿಧಿಸಿದೆ. ಮಾನವೀಯತೆಯ ವಿರುದ್ಧದ ಹಿಂಸಾಚಾರ ಆರೋಪಗಳ ಬಗ್ಗೆ ವಿಚಾರಣೆ ನಡೆಸಿದ ವಿಶೇಷ ನ್ಯಾಯಮಂಡಳಿ, ನೂರಾರು ಜನರ ಸಾವಿಗೆ ಕಾರಣರಾದ ಪೊಲೀಸ್ ದಬ್ಬಾಳಿಕೆ ಪ್ರಕರಣದಲ್ಲಿ ಶೇಖ್ ಹಸೀನಾ ತಪ್ಪಿತಸ್ಥರು ಎಂದು ಘೋಷಿಸಿತು. ಅಲ್ಲದೇ ಶೇಖ್ ಹಸೀನಾ ಗರಿಷ್ಠ ಶಿಕ್ಷೆಗೆ ಅರ್ಹರು ಎಂದು ನ್ಯಾಯಾಲಯ ತೀರ್ಪು ನೀಡಿತು.
ಕಳೆದ ವರ್ಷ ನೆರೆಯ ದೇಶದಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಗಲ್ಲುಶಿಕ್ಷೆ ವಿಧಿಸಿದೆ. ಬಾಂಗ್ಲಾದೇಶದಿಂದ ಪಲಾಯನ ಮಾಡಿದ್ದ ಶೇಖ್ ಹಸೀನಾ ಆಗಿನಿಂದ ಭಾರತದ ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ.
ಕಳೆದ ವರ್ಷ ಬಾಂಗ್ಲಾದೇಶದಲಿ ಭುಗಿಲೆದ್ದಿದ್ದ ವಿದ್ಯಾರ್ಥಿ ಚಳುವಳಿಯನ್ನು, ಆಗಿನ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಅತ್ಯಂತ ನಿರ್ದಯವಾಗಿ ಹತ್ತಿಕ್ಕಿತ್ತು. ನೂರಾರು ವಿದ್ಯಾರ್ಥಿಗಳನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಗಿತ್ತು.
ಮರಣದಂಡನೆ ಶಿಕ್ಷೆ ವಿಧಿಸಿದ ನಂತರದ ತಮ್ಮ ಮೊದಲ ಹೇಳಿಕೆಯಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, “ನಾನೇನೂ ತಪ್ಪು ಮಾಡಿಲ್ಲ, ನನ್ನ ವಿರುದ್ಧದ ತೀರ್ಪು ಸುಳ್ಳು. ನನ್ನ ವಿರುದ್ಧ ಘೋಷಿಸಲಾದ ತೀರ್ಪುಗಳನ್ನು ಯಾವುದೇ ಪ್ರಜಾಪ್ರಭುತ್ವದ ಆದೇಶವಿಲ್ಲದ ಆಯ್ಕೆಯಾಗದ ಸರ್ಕಾರವು ಸ್ಥಾಪಿಸಿದ್ದ ನ್ಯಾಯಮಂಡಳಿಯಿಂದ ಈ ತೀರ್ಪು ನೀಡಲಾಗಿದೆ” ಎಂದು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
“ಅವರು ತೀರ್ಪು ನೀಡಲಿ. ನನಗೆ ಚಿಂತೆಯಿಲ್ಲ. ಅಲ್ಲಾಹ್ ನನಗೆ ಜೀವ ಕೊಟ್ಟನು, ಅಲ್ಲಾಹ್ ಅದನ್ನು ತೆಗೆದುಕೊಳ್ಳುತ್ತಾನೆ. ಅಲ್ಲಿಯವರೆಗೂ ನಾನು ನನ್ನ ದೇಶದ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇನೆ. ನಾನು ನನ್ನ ಹೆತ್ತವರನ್ನು, ನನ್ನ ಒಡಹುಟ್ಟಿದವರನ್ನು ಕಳೆದುಕೊಂಡಿದ್ದೇನೆ. ಅವರು ನನ್ನ ಮನೆಯನ್ನು ಸುಟ್ಟುಹಾಕಿದ್ದಾರೆ” ಎಂದು ಶೇಖ್ ಹಸೀನಾ ಹೇಳಿದ್ದಾರೆ.

