ಬೆಂಗಳೂರು: ವಿಮಾನ ಪ್ರಯಾಣದ ವೇಳೆ ತೀವ್ರ ಅಸ್ವಸ್ಥಗೊಂಡ ಯುವತಿಗೆ ತಕ್ಷಣ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಖಾನಾಪುರದ ಮಾಜಿ ಶಾಸಕಿ ಹಾಗೂ ವೈದ್ಯೆ ಡಾ. ಅಂಜಲಿ ನಿಂಬಾಳ್ಕರ್ (Anjali Nimbalkar) ಅವರ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೋವಾ ರಾಜ್ಯದ ಎಐಸಿಸಿ ಕಾರ್ಯದರ್ಶಿಯಾಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರು ವಿಮಾನದ ಮೂಲಕ ಗೋವದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ, ಸಹಪ್ರಯಾಣಿಕೆಯಾಗಿದ್ದ ಅಮೆರಿಕ ಮೂಲದ ಯುವತಿಯೊಬ್ಬರಿಗೆ ತೀವ್ರ ನಡುಕ ಕಾಣಿಸಿಕೊಂಡು, ಆಕೆ ಸ್ಥಳದಲ್ಲೇ ಪ್ರಜ್ಞಾಹೀನರಾಗಿ ಕುಸಿದುಬಿದ್ದಿದ್ದಾರೆ.
ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಗಾಬರಿಗೊಂಡಾಗ, ಡಾ. ಅಂಜಲಿ ಅವರು ತಕ್ಷಣವೇ ಧಾವಿಸಿ ತಮ್ಮ ವೈದ್ಯಕೀಯ ಅನುಭವದ ಆಧಾರದಲ್ಲಿ ‘ಕಾರ್ಡಿಯೋ–ಪಲ್ಮನರಿ ರಿಸಸ್ಸಿಟೇಷನ್’ (ಸಿಪಿಆರ್) ನೀಡಲು ಆರಂಭಿಸಿದರು. ಅವರ ಸತತ ಪ್ರಯತ್ನದಿಂದ ಯುವತಿಯ ಉಸಿರಾಟ ಮರುಕಳಿಸಿತು. ಆದರೆ, ಸುಮಾರು ಅರ್ಧ ಗಂಟೆಯ ಬಳಿಕ ಯುವತಿ ಮತ್ತೆ ಪ್ರಜ್ಞೆ ತಪ್ಪಿದಾಗ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಧೈರ್ಯ ಕಳೆದುಕೊಳ್ಳದ ಡಾ. ಅಂಜಲಿ ಅವರು ಮತ್ತೆ ತುರ್ತು ಚಿಕಿತ್ಸೆ ನೀಡಿ ಯುವತಿಯ ಪ್ರಾಣ ಉಳಿಸಿದರು.
ಇದೇ ವೇಳೆ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದ್ದರು. ವಿಮಾನ ನಿಲ್ದಾಣ ತಲುಪಿದ ಕೂಡಲೇ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆಯನ್ನು ಖುದ್ದಾಗಿ ನಿಂತು ಮಾಡಿದರು.
ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಕೊಂಡಾಡಿದ್ದಾರೆ. ಗೋವಾ–ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ತುರ್ತು ವೈದ್ಯಕೀಯ ನೆರವಿನ ಅಗತ್ಯವನ್ನು ಅರಿತು ತಕ್ಷಣ ಸಿಪಿಆರ್ ನೀಡಿ ಅಮೆರಿಕಾದ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಹೆಮ್ಮೆಯೆನಿಸಿತು ಎಂದು ಅವರು ತಿಳಿಸಿದ್ದಾರೆ.
ವೈದ್ಯ ವೃತ್ತಿಯಿಂದ ಸಕ್ರಿಯ ರಾಜಕೀಯದಲ್ಲಿದ್ದರೂ ಸಹ, ಸಮಯಪ್ರಜ್ಞೆ ಮತ್ತು ಸೇವಾ ಮನೋಭಾವದಿಂದ ರೋಗಿಯ ನೆರವಿಗೆ ಧಾವಿಸಿದ ಅಂಜಲಿಯವರ ನಡೆ ಅತ್ಯಂತ ಶ್ಲಾಘನೀಯ. ಅಧಿಕಾರವಿರಲಿ ಅಥವಾ ಇಲ್ಲದಿರಲಿ, ಜನಸೇವೆ ಎಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ಕೈಲಾದ ಸಹಾಯಕ್ಕೆ ನಿಲ್ಲುವಂತಹವರು ಸಮಾಜಕ್ಕೆ ಮಾದರಿ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ನೂರುಕಾಲ ಆಯಸ್ಸು ಮತ್ತು ಆರೋಗ್ಯ ನೀಡಿ, ಇನ್ನಷ್ಟು ಕಷ್ಟದಲ್ಲಿರುವ ಜೀವಗಳಿಗೆ ಅವರಿಂದ ನೆರವು ಸಿಗುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

