ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಭೀಕರ ಅಪಘಾತ ಮಂಡ್ಯ ತಾಲ್ಲೂಕು ತೂಬಿನಕೆರೆ ಎಕ್ಸಿಟ್ ಬಳಿ ನಡೆದಿದೆ.
ಕಾರು ಮೈಸೂರು ಕಡೆಗೆ ಹೊರಟಿತ್ತು. ಈ ವೇಳೆ ಎಕ್ಸ್ಪ್ರೆಸ್‌ವೇನಿಂದ ಎಕ್ಸಿಟ್ ಆಗುವಾಗ ಕಾರು ಚಾಲಕನಿಗೆ ಗೊಂದಲ ಉಂಟಾಗಿದ್ದು, ಮತ್ತೆ ಕಾರನ್ನು ಎಕ್ಸ್ಪ್ರೆಸ್ ವೇಗೆ ತಿರುಗಿಸಿದ್ದಾನೆ. ಇದೇ ವೇಳೆ ಹಿಂದಿನಿಂದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಬಂದಿದ್ದು, ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತರನ್ನು ಬೆಂಗಳೂರಿನ ಜೆಪಿ ನಗರದವರೆಂದು ಗುರುತಿಸಲಾಗಿದೆ, 52 ವರ್ಷದ ಸತ್ಯಾನಂದ ರಾಜೇ ಅರಸ್, ಪತ್ನಿ ನಿಶ್ಚಿತಾ , ಚಂದ್ರು ಮತ್ತು ಸುವೇದಿನಿ ರಾಣಿ ಎಂದು ಗುರುತಿಸಲಾಗಿದೆ, ಸ್ಥಳಕ್ಕೆ ದಕ್ಷಿಣ ವಲಯ ಐಜಿ ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸತ್ಯಾನಂದರಾಜೇ ಅರಸೇ ಎಲೆಕ್ಟ್ರಿಕ್ ಕಂಟ್ರ್ಯಾಕ್ಟರ್ ಆಗಿದ್ದರು. ಚಂದ್ರರಾಜೇ ಅರಸ್ ಪತ್ನಿ ಸುವೇದಿನಿ ರಾಣಿಯ ಸಹೋದರ. ಚಂದ್ರರಾಜೇ ಅರಸ್ ಅವರು ಕಾರು ಚಾಲನೆ ಮಾಡುತ್ತಿದ್ದರು.
ನಿವೃತ್ತ ಜೆಇ ಸತ್ಯಾನಂದರಾಜೇ ಅರಸ್ ಅವರ ಸೋದರ ಮಾವ ಸಾವನ್ನಪ್ಪಿದ್ದರು. ಕುಟುಂಬ ಸಮೇತ ಮಾವನ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಸತ್ಯಾನಂದರಾಜೇ ಅರಸ್ ಕುಟುಂಬ ಕಾರಿನಲ್ಲಿ ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು.

