ಲಖನೌ: ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಮಂಗಳವಾರ ಕುಟುಂಬ ಸಮೇತ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ. ಅದಾನಿ, ಅವರ ಪತ್ನಿ, ಅದಾನಿ ಫೌಂಡೇಶನ್‌ನ ಅಧ್ಯಕ್ಷರಾದ ಪ್ರೀತಿ ಅದಾನಿ ಹಾಗೂ ಮಗ ಅದಾನಿ ಪೋರ್ಟ್ಸ್ ಮತ್ತು ಸೆಜ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ಕೂಡ ಗಂಗಾ ನದಿಯ ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಮಹಾಕುಂಭವು “ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಯ ಮಹಾನ್ ಯಾಗ” ಎಂದು ಹೇಳಿದರು.ಈ ಮಹಾಯಜ್ಞದಲ್ಲಿ ಕುಂಭಮೇಳಕ್ಕೆ ಬರುವ ಭಕ್ತರಿಗೆ ಪ್ರತಿಷ್ಠಿತ ಸಂಸ್ಥೆ ಗೀತಾ ಪ್ರೆಸ್ ಸಹಯೋಗದಲ್ಲಿ ಒಂದು ಕೋಟಿ ಆರತಿ ಸಂಗ್ರಹ ಪ್ರತಿಗಳನ್ನು ಉಚಿತವಾಗಿ ನೀಡುತ್ತಿರುವುದು ನಮಗೆ ಅಪಾರ ಸಂತಸ ತಂದಿದೆ ಎಂದು ಹೇಳಿದ್ದಾರೆ.
ಮಹಾಕುಂಭ ಮೇಳವನ್ನು ಆಯೋಜಿಸಿದ್ದಕ್ಕಾಗಿ ಉತ್ತರ ಪ್ರದೇಶ ಆಡಳಿತ, ನೈರ್ಮಲ್ಯ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಪ್ರಯಾಗ್‌ರಾಜ್ ಮಹಾ ಕುಂಭದಲ್ಲಿ ನನ್ನ ಅನುಭವ ಅದ್ಭುತವಾಗಿದೆ. ಮಾತೆ ಗಂಗೆಯ ಆಶೀರ್ವಾದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ ಎಂದು ಅವರು ಹೇಳಿದ್ದಾರೆ.
ಇಸ್ಕಾನ್ ದೇವಸ್ಥಾನದ ಶಿಬಿರಕ್ಕೆ ಭೇಟಿ, ಊಟದ ವ್ಯವಸ್ಥೆ ಪರಿಶೀಲನೆ
ಗೌತಮ್ ಅದಾನಿ ಅವರು ಕುಂಭ ಮೇಳದಲ್ಲಿ ಇಸ್ಕಾನ್ ದೇವಸ್ಥಾನದ ಶಿಬಿರಕ್ಕೆ ಭೇಟಿ ನೀಡಿ ಮಹಾಪ್ರಸಾದ ಮಾಡಲು ಸಹಾಯ ಮಾಡಿದ್ದಾರೆ. ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭಮೇಳದಲ್ಲಿ ಭಕ್ತರಿಗೆ ಊಟ ಬಡಿಸಲು ಅದಾನಿ ಗ್ರೂಪ್ ಮತ್ತು ಇಸ್ಕಾನ್ ಅಥವಾ ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ ಕೈ ಜೋಡಿಸಿದೆ. ಈ ಪ್ರಸಾದ ವಿತರಣಾ ಕಾರ್ಯ ಕೊನೆ ದಿನದ ವರೆಗೂ ಇರಲಿದೆ.
