ಢಾಕಾ: ಪ್ರಧಾನಿ ನರೇಂದ್ರ ಮೋದಿ ಅವರು 2021 ರ ಮಾರ್ಚ್ ತಿಂಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಂಗ್ಲಾದೇಶದ ಸತ್ಖಿರಾದ ಶ್ಯಾಮನಗರದಲ್ಲಿರುವ ಜೆಶೋರೇಶ್ವರಿ ದೇವಸ್ಥಾನದ ಕಾಳಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಕಿರೀಟವನ್ನು ಕಳವು ಮಾಡಲಾಗಿದೆ.
ಗುರುವಾರ ಮಧ್ಯಾಹ್ನ 2.00 ರಿಂದ 2.30ರ ನಡುವೆ ದೇವಾಲಯದ ಅರ್ಚಕ ದಿಲೀಪ್ ಮುಖರ್ಜಿ ಅವರು ದಿನದ ಪೂಜೆ ಮಾಡಿ ಹೊರಟ ನಂತರ ಕಳ್ಳತನ ನಡೆದಿದೆ.
ದೇವರ ತಲೆಯಿಂದ ಕಿರೀಟ ಕಾಣೆಯಾಗಿದೆ ಎಂದು ಸ್ವಚ್ಛತಾ ಸಿಬ್ಬಂದಿ ತಿಳಿಸಿದ್ದಾರೆ. ಕಳ್ಳನನ್ನು ಗುರುತಿಸಲು ನಾವು ದೇವಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಶ್ಯಾಮನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತೈಜುಲ್ ಇಸ್ಲಾಂ ತಿಳಿಸಿದ್ದಾರೆ.
2021ರ ಮಾ.27 ರಂದು ಬಾಂಗ್ಲಾದೇಶ ಪ್ರವಾಸದ ಸಮಯದಲ್ಲಿ ಪ್ರಧಾನಿ ಮೋದಿ ಜೆಶೋರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ದಿನ ಅವರು ಸಾಂಕೇತಿಕ ಸಂಕೇತವಾಗಿ ಕಿರೀಟವನ್ನು ದೇವರ ತಲೆಯ ಮೇಲೆ ಇರಿಸಿದರು. ಮೋದಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ದೇವಾಲಯವು ಈಶ್ವರಿಪುರದಲ್ಲಿದೆ. ಸತ್ಖಿರಾದ ಉಪಜಿಲಾದ ಶ್ಯಾಮ್ ನಗರದಲ್ಲಿರುವ ಹಳ್ಳಿಯಲ್ಲಿದೆ. 12 ನೇ ಶತಮಾನದ ಉತ್ತರಾರ್ಧದಲ್ಲಿ ಅನಾರಿ ಎಂಬ ಬ್ರಾಹ್ಮಣನಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.
ಕಳವಾದ ಕಿರೀಟವು ಬೆಳ್ಳಿ ಮತ್ತು ಚಿನ್ನದ ಲೇಪಿತದಿಂದ ಮಾಡಿದ ಗಮನಾರ್ಹ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಹಿಂದೂ ಪುರಾಣಗಳ ಪ್ರಕಾರ, ಜೆಶೋರೇಶ್ವರಿ ದೇವಾಲಯವು ಭಾರತ ಮತ್ತು ನೆರೆಯ ದೇಶಗಳಲ್ಲಿ ಹರಡಿರುವ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ.

