ಪಲ್ಲೆಕೆಲೆ, ಫೆ.25: ಪಾಕಿಸ್ತಾನ ವಿರುದ್ಧ ನಡೆದ ಟಿ20 ವಿಶ್ವಕಪ್ 2026ರ ಸೂಪರ್-8ರ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ (Harry Brook) ಅದ್ಭುತ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಟೂರ್ನಿಯಲ್ಲಿ ನಾಯಕನಾಗಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಬ್ರೂಕ್ ಪಾತ್ರರಾಗಿದ್ದಾರೆ.
ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬ್ರೂಕ್ 51 ಎಸೆತಗಳಲ್ಲಿ 100 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಸೆಮಿಫೈನಲ್‌ಗೆ ಮುನ್ನಡೆದಿದೆ.
ಇದಕ್ಕೂ ಮುನ್ನ ಟಿ20 ವಿಶ್ವಕಪ್ ಇತಿಹಾಸದಲ್ಲಿ 13 ಶತಕಗಳು ದಾಖಲಾಗಿದ್ದರೂ, ಅವುಗಳಲ್ಲಿ ಯಾವುದೂ ನಾಯಕನಿಂದ ಬಂದಿರಲಿಲ್ಲ. 2010ರಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ ಭಾರತದ ವಿರುದ್ಧ 98 ರನ್ ಗಳಿಸಿದ್ದ ಕ್ರಿಸ್ ಗೇಲ್ ನಾಯಕನೊಬ್ಬನ ಅತ್ಯಧಿಕ ಸ್ಕೋರ್ ಆಗಿತ್ತು. ಇದೀಗ ಆ ದಾಖಲೆಯನ್ನು ಬ್ರೂಕ್ ಮುರಿದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ನಾಯಕನೊಬ್ಬ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್‌ಗಳು:
100 – ಹ್ಯಾರಿ ಬ್ರೂಕ್ vs ಪಾಕಿಸ್ತಾನ, ಪಲ್ಲೆಕೆಲೆ, 2026*
98 – ಕ್ರಿಸ್ ಗೇಲ್ vs ಭಾರತ, ಬ್ರಿಡ್ಜ್‌ಟೌನ್, 2010
94* – ಲೋರ್ಕನ್ ಟಕರ್ vs ಒಮಾನ್, ಕೊಲಂಬೊ ಎಸ್‌ಎಸ್‌ಸಿ, 2026
92 – ರೋಹಿತ್ ಶರ್ಮಾ vs ಆಸ್ಟ್ರೇಲಿಯಾ, ಬ್ರಿಡ್ಜ್‌ಟೌನ್, 2024
ಎಲ್ಲಾ ಸ್ವರೂಪಗಳಲ್ಲಿ ಶತಕ ಬಾರಿಸಿದ ಮೂರನೇ ಇಂಗ್ಲಿಷ್ ಆಟಗಾರ
ಬ್ರೂಕ್ ತಮ್ಮ ಶತಕದ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20 — ಮೂರು ಸ್ವರೂಪಗಳಲ್ಲೂ ಶತಕ ಬಾರಿಸಿದ ಮೂರನೇ ಇಂಗ್ಲಿಷ್ ಆಟಗಾರರಾಗಿದ್ದಾರೆ. ಈ ಪಟ್ಟಿಯಲ್ಲಿ ಈಗಾಗಲೇ ಜೋಸ್ ಬಟ್ಲರ್ ಮತ್ತು ಡೇವಿಡ್ ಮಲಾನ್ ಇದ್ದಾರೆ.
ಬ್ರೂಕ್ ಕೇವಲ 50 ಎಸೆತಗಳಲ್ಲಿ ಶತಕ ಪೂರೈಸಿದ್ದು, ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿನ ಎರಡನೇ ಅತಿ ವೇಗದ ಶತಕವಾಗಿದೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಗೇಲ್ 47 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು.
ಟಿ20 ವಿಶ್ವಕಪ್‌ನಲ್ಲಿ ಅತಿ ವೇಗದ ಶತಕಗಳು:
47 ಎಸೆತ – ಕ್ರಿಸ್ ಗೇಲ್ vs ಇಂಗ್ಲೆಂಡ್, ವಾಂಖೆಡೆ, 2016
50 ಎಸೆತ – ಕ್ರಿಸ್ ಗೇಲ್ vs ದಕ್ಷಿಣ ಆಫ್ರಿಕಾ, ಜೋಹಾನ್ಸ್‌ಬರ್ಗ್, 2007
50 ಎಸೆತ – ಹ್ಯಾರಿ ಬ್ರೂಕ್ vs ಪಾಕಿಸ್ತಾನ, ಪಲ್ಲೆಕೆಲೆ, 2026*
51 ಎಸೆತ – ಬ್ರೆಂಡನ್ ಮೆಕಲಮ್ vs ಬಾಂಗ್ಲಾದೇಶ, ಪಲ್ಲೆಕೆಲೆ, 2012
ಬ್ರೂಕ್ ಅವರ ಈ ಸಿಡಿಲಿನ ಇನ್ನಿಂಗ್ಸ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಬರೆದಂತಾಗಿದೆ.

