ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಹವಾಮಾನದಲ್ಲಿ ತೀವ್ರ ಏರುಪೇರಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂದಿನ ಎರಡು ದಿನಗಳಲ್ಲಿ ಗಂಟೆಗೆ ಸುಮಾರು 70 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿಗಳು ಬೀಸುವ ಸಂಭವವಿದ್ದು, ಇದರ ಜೊತೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಬದಲಾವಣೆಯಿಂದ ಕೆಲವೆಡೆ ಮಿಂಚು ಸಹಿತ ಮಳೆ ಮತ್ತು ಗಾಳಿ ಮಳೆ ಉಂಟಾಗುವ ಸಾಧ್ಯತೆ ಇದೆ.
ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ಪುದುಚೇರಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ತೀವ್ರ ಗಾಳಿ ಮತ್ತು ಮಳೆಯ ಹಿನ್ನೆಲೆ ಮರಗಳು ಉರುಳುವ, ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಹವಾಮಾನ ಇಲಾಖೆ ಮನವಿ ಮಾಡಿದೆ.

