ಬೆಂಗಳೂರು: ಸಿನಿಮಾಗಳ ಟಿಕೆಟ್ ದರವನ್ನು 200 ರೂಪಾಯಿಗೆ ನಿಗದಿಪಡಿಸಬೇಕೆಂದು ದಶಕಗಳಿಂದಾನೂ ಹೋರಾಟ ನಡೆಯುತ್ತಲೇ ಇದೆ. ಈ ವಿಚಾರ ಆಗಾಗ ಚರ್ಚೆಗೆ ಬಂದು ಮಾಯವಾಗುತ್ತಿತ್ತು. ಆದರೆ ಈ ಬಾರಿ ರಾಜ್ಯ ಸರ್ಕಾರ ಅದಕ್ಕೊಂದು ಫೈನಲ್ ಮುದ್ರೆಯನ್ನು ಒತ್ತಿತ್ತು. ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಕಡೆ ಎಲ್ಲಾ ಸಿನಿಮಾಗಳಿಗೂ ಏಕರೂಪ ದರ ಇರಲಿದೆ ಎಂದು ಆದೇಶ ಹೊರಡಿಸಿತ್ತು. ಆದರೆ ಇದೀಗ ಸಿದ್ದರಾಮಯ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ದೊಡ್ಡ ದೊಡ್ಡ ಸಿನಿಮಾಗಳೇ ರಿಲೀಸ್ ಗೆ ರೆಡಿಯಾಗಿವೆ. ಹೀಗಿರುವಾಗ 200 ರೂಪಾಯಿಗೆ ಟಿಕೆಟ್ ದರ ನಿಗದಿಪಡಿಸಿದರೆ, ನಷ್ಟ ಉಂಟಾಗುವ ಆತಂಕವೂ ನಿರ್ಮಾಣ ಸಂಸ್ಥೆಗಳನ್ನ ಕಾಡುತ್ತಿದೆ. ಹೀಗಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರವನ್ನು 200 ರೂಪಾಯಿ ನಿಗದಿ ಮಾಡಿದ್ದ ನಿರ್ಧಾರಕ್ಕೆ ಹಲವರ ವಿರೋಧವೂ ಇತ್ತು. ಈ ಸಂಬಂಧ ಅರ್ಜಿಯೂ ಸಲ್ಲಿಕೆಯಾಗಿತ್ತು. ಇದೀಗ ಕೋರ್ಟ್ ತಡೆಹಿಡಿದಿದೆ.
ಈ ಸಂಬಂಧ ಸರ್ಕಾರದ ನಿರ್ಧಾರವನ್ನ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಆಗಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್ನ ನ್ಯಾಯಮೂರ್ತಿ ರವಿ ಹೊಸಮನಿ ನೇತೃತ್ವದ ಪೀಠವು, ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಜೊತೆಗೆ ವಿಚಾರಣೆಯನ್ನ ಮುಂದೂಡಿಕೆ ಮಾಡಿದೆ. ದಶಕದ ಹೋರಾಟದ ಫಲಕ್ಕೆ ಮತ್ತೆ ಬ್ರೇಕ್ ಬಿದ್ದಿದೆ. ಕೋರ್ಟ್ ಮುಂದಿನ ವಿಚಾರಣೆಯ ಬಳಿಕ ಏನು ತೀರ್ಮಾನವಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

