Kamal Haasan : ಕರ್ನಾಟಕ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನಲೆಯಲ್ಲಿ ಬಹುನಿರೀಕ್ಷಿತ ತಮಿಳುನಟ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಿತ್ರ ಬಿಡುಗಡೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮುಂದಿನ ಅರ್ಜಿ ವಿಚಾರಣೆ ಜೂ.10ರಂದು ನಡೆಯಲಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕಮಲ್ ಹಾಸನ್ ನಡುವೆ ಸಮಸ್ಯೆ ಇತ್ಯರ್ಥವಾಗುವರೆಗೂ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಏಕಸದಸ್ಯ ಪೀಠದ ನಾಗಮೂರ್ತಿ ಎಚ್.ನಾಗಪ್ರಸನ್ನ ಅವರು ಆದೇಶ ನೀಡಿದರು.
ಇದರಿಂದ ಇದೇ 5ರಂದು ದೇಶ ಮತ್ತು ವಿದೇಶಗಳಲ್ಲಿ ಬಿಡುಗಡೆಗೆ ಸಿದ್ದಗೊಂಡಿರುವ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿಲ್ಲ, ಕ್ಷಮೆ ಕೇಳಿದ್ದರೆ ಅರ್ಜಿ ವಿಚಾರಣೆ ನಡೆಸಬಹುದಿತ್ತು. ಆದರೆ ಅವರಿಗೆ(ಕಮಲ್ ಹಾಸನ್) ಅಹಂ ಅಡ್ಡಿಯಾಗುತ್ತಿರಬಹುದು. ವಾಣಿಜ್ಯ ಮಂಡಳಿಯವರು ಕ್ಷಮೆ ಕೇಳಬೇಕೆಂದು ಕೋರಿದ್ದಾರೆ.
ಆದರೆ ಕಮಲ್ ಹಾಸನ್ ಕ್ಷಮೆ ಕೇಳುವುದಿಲ್ಲ ಎನ್ನುತ್ತಾರೆ. ಒಂದು ವಾರದಲ್ಲಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಅಲ್ಲಿಯವರೆಗೂ ಚಿತ್ರ ಬಿಡುಗಡೆ ಬೇಡ ಎಂದು ಅಡೋಕೇಟ್ ಜನರಲ್ಗೆ ನೋಟಿಸ್ ಜಾರಿ ಮಾಡಿ ಜೂ.10ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು. ಈಗಲೂ ನೀವು ವಿವೇಚನೆಯನ್ನು ಬಳಸಿ ಒಂದು ಕ್ಷಮೆ ಕೇಳುವುದರಿಂದ ಸಮಸ್ಯೆ ಇತ್ಯರ್ಥವಾಗುತ್ತದೆ. ವಿಷಮ ಸ್ಥಿತಿಯಲ್ಲಿ ವಿವೇಚನೆ ಮುಖ್ಯ. ನೀವು ಮೊಂಡುತನ ಮಾಡಿದರೆ ಸಮಸ್ಯೆ ಮತ್ತಷ್ಟು ಬೆಳೆಯುತ್ತದೆ. ನಿಮ್ಮ ಕಕ್ಷಿದಾರರಿಗೆ ಈಗಲೂ ಕಾಲ ಮಿಂಚಿಲ್ಲ. ಸರಿಯಾದ ಬುದ್ದಿ ಹೇಳಿ ಎಂದು ನಾಗಪ್ರಸನ್ನ ಅವರ ಪೀಠ ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪರಿಗೆ ಸೂಚನೆ ನೀಡಿದ್ದಾರೆ.
ಇದಕ್ಕೂ ಮುನ್ನ ಬೆಳಗ್ಗೆ ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಕಮಲ್ ಹಾಸನ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವ ನೀವು ಮೊದಲು ಕ್ಷಮೆ ಕೇಳಬೇಕು. ಭಾಷೆ ಹುಟ್ಟಿದ್ದರೆ ಬಗ್ಗೆ ಮಾತನಾಡುವುದಕ್ಕೆ ಭಾಷಾ ನೀವು ತಜ್ಞರೇ? ಅಥವಾ ಇತಿಹಾಸಕಾರರೇ? ಕ್ಷಮೆಯಾಚಿಸದಿದ್ದರೆ ಕರ್ನಾಟಕದಲ್ಲಿ ಚಿತ್ರ ಪ್ರದರ್ಶನಗೊಳ್ಳಬೇಕೆಂದು ಏಕೆ ಬಯಸುತ್ತೀರಿ? ಮಾಡಿರುವ ತಪ್ಪಿಗೆ ಪೊಲೀಸರ ರಕ್ಷಣೆ ಬೇರೆ ಬೇಕಾ..? ಎಂದು ಪ್ರಶ್ನಿಸಿತು.
ತಮಿಳು ಭಾಷೆಯಿಂದ ಕನ್ನಡ ಹುಟ್ಟಿತು ಎಂದು ಹೇಳಲು ನೀವೇನು ಭಾಷಾ ತಜ್ಞರೇ? ಅಥವಾ ಇತಿಹಾಸಗಾರರೇ? ಜನರ ಭಾವನೆಗಳಿಗೆ ಧಕ್ಕೆ ತಂದ ಮೇಲೆ ಕ್ಷಮೆಯಾಚಿಸಬೇಕಲ್ಲವೇ? ಎಂದು ಪ್ರಶ್ನೆ ಮಾಡಿದರು.

