ಮ್ಯಾಡ್ರಿಡ್/ಕಾರ್ಡೋಬಾ: ದಕ್ಷಿಣ ಸ್ಪೇನ್‌ನ ಆಂಡಲೂಸಿಯಾ ಪ್ರದೇಶದಲ್ಲಿ ಎರಡು ಹೈಸ್ಪೀಡ್ ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 39 ಪ್ರಯಾಣಿಕರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸ್ಪೇನ್‌ನ ಸಾರಿಗೆ ಸಚಿವರು ಮಾಹಿತಿ ನೀಡಿರುವಂತೆ, ಮಲಗಾದಿಂದ ಮ್ಯಾಡ್ರಿಡ್‌ಗೆ ಪ್ರಯಾಣಿಸುತ್ತಿದ್ದ ಹೈಸ್ಪೀಡ್ ರೈಲು ಸಂಜೆ ಸುಮಾರು 7.45ರ ವೇಳೆಗೆ ಕಾರ್ಡೋಬಾ ಸಮೀಪ ಹಳಿ ತಪ್ಪಿ, ಎದುರು ಹಳಿಗೆ ನುಗ್ಗಿದೆ. ಇದೇ ವೇಳೆ ಮ್ಯಾಡ್ರಿಡ್‌ನಿಂದ ದಕ್ಷಿಣ ಸ್ಪೇನ್‌ನ ಹುಯೆಲ್ವಾ ಕಡೆಗೆ ಸಾಗುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದಿದೆ.
ರೈಲು ನಿರ್ವಾಹಕ ಸಂಸ್ಥೆ ಅಡಿಫ್ ಮಾಹಿತಿ ಪ್ರಕಾರ, ಹಳಿ ತಪ್ಪಿದ ರೈಲಿನಲ್ಲಿ ಸುಮಾರು 300 ಪ್ರಯಾಣಿಕರು, ಎದುರಿಗೆ ಬರುತ್ತಿದ್ದ ರೈಲಿನಲ್ಲಿ ಸುಮಾರು 200 ಪ್ರಯಾಣಿಕರು ಇದ್ದರು. ಮೊದಲ ರೈಲಿನ ಹಿಂಭಾಗದ ಕೋಚ್‌ಗಳು ಡಿಕ್ಕಿ ಹೊಡೆದು, ಎದುರಿನ ರೈಲಿನ ಮೊದಲ ಎರಡು ಬೋಗಿಗಳು ಹಳಿಯಿಂದ ಹೊರಬಿದ್ದು, ಸುಮಾರು ನಾಲ್ಕು ಮೀಟರ್ ಇಳಿಜಾರಿನಲ್ಲಿ ಉರುಳಿವೆ.
ಹಳಿ ತಪ್ಪಿದ ರೈಲನ್ನು ಖಾಸಗಿ ರೈಲು ಸಂಸ್ಥೆ ಇರಿಯೊ (Iryo) ನಿರ್ವಹಿಸುತ್ತಿದ್ದರೆ, ಡಿಕ್ಕಿ ಹೊಡೆದ ಮತ್ತೊಂದು ರೈಲು ಸ್ಪೇನ್‌ನ ಸರ್ಕಾರಿ ಸ್ವಾಮ್ಯದ ರೈಲು ಸಂಸ್ಥೆ ರೆನ್ಫೆ (Renfe)ಗೆ ಸೇರಿದೆ.
ಕಾರ್ಡೋಬಾ ಅಗ್ನಿಶಾಮಕ ದಳದ ಮುಖ್ಯಸ್ಥ ಫ್ರಾನ್ಸಿಸ್ಕೊ ಕಾರ್ಮೋನಾ, ಸ್ಪ್ಯಾನಿಷ್ ರಾಷ್ಟ್ರೀಯ ರೇಡಿಯೋ RNEಗೆ ಮಾಹಿತಿ ನೀಡಿ, “ಒಂದು ರೈಲು ತೀವ್ರವಾಗಿ ನಜ್ಜುಗುಜ್ಜಾಗಿದ್ದು, ಕನಿಷ್ಠ ನಾಲ್ಕು ಬೋಗಿಗಳು ಹಳಿ ತಪ್ಪಿವೆ” ಎಂದು ತಿಳಿಸಿದ್ದಾರೆ.
ಇನ್ನು ಆಂಡಲೂಸಿಯಾ ಪ್ರಾದೇಶಿಕ ಆರೋಗ್ಯ ಮುಖ್ಯಸ್ಥ ಆಂಟೋನಿಯೊ ಸ್ಯಾನ್ಜ್, ಗಾಯಗೊಂಡ ಪ್ರಯಾಣಿಕರನ್ನು ಆರು ವಿಭಿನ್ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಅಪಘಾತದ ಕಾರಣ ಕುರಿತು ತನಿಖೆ ಮುಂದುವರಿದಿದೆ.

