ಬೆಂಗಳೂರು: ಇತ್ತೀಚೆಗೆ ಸಂಭವಿಸಿದ ಕಾಲ್ತುಳಿ ಪ್ರಕರಣದ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ವಿಶೇಷ ಹೋಮ–ಹವನ ಹಾಗೂ ಮಹಾಪೂಜೆ ನೆರವೇರಿಸಲಾಯಿತು. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಸ್ಟೇಡಿಯಂಗೆ ಶಾಂತಿ–ಸೌಹಾರ್ದ ಹಾಗೂ ಒಳಿತಾಗಲೆಂದು ಈ ಪೂಜೆಯನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಸುದರ್ಶನ ಹೋಮ, ನವಗ್ರಹ ಪೂಜೆ ಮತ್ತು ಗಣಪತಿ ಪೂಜೆಗಳನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ಒಟ್ಟು 6 ಮಂದಿ ಪುರೋಹಿತರು ಹೋಮ ಕಾರ್ಯವನ್ನು ಸಂಪ್ರದಾಯಬದ್ಧವಾಗಿ ನಡೆಸಿದರು.
ಕೆಎಸ್‌ಸಿಎ ನೂತನ ಪದಾಧಿಕಾರಿಗಳ ಭಾಗಿ
ಪೂಜಾ ಕಾರ್ಯಕ್ರಮದಲ್ಲಿ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ) ನೂತನ ಪದಾಧಿಕಾರಿಗಳು ಭಾಗವಹಿಸಿ, ಚಿನ್ನಸ್ವಾಮಿ ಸ್ಟೇಡಿಯಂಗೆ ವಿಶೇಷ ಪೂಜೆ ಸಲ್ಲಿಸಿದರು. ಸ್ಟೇಡಿಯಂಗೆ ಒಳಿತಾಗಲಿ, ಮುಂದೆ ಯಾವುದೇ ಅನಾಹುತಗಳು ನಡೆಯದಿರಲಿ ಎಂಬ ಉದ್ದೇಶದಿಂದ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
24ರಿಂದ ಪಂದ್ಯಾವಳಿ ಆರಂಭ
24ರಿಂದ ಕ್ರಿಕೆಟ್ ಪಂದ್ಯಾವಳಿ ಆರಂಭವಾಗುತ್ತಿರುವ ಹಿನ್ನೆಲೆ ಈ ಪೂಜೆ ಆಯೋಜಿಸಲಾಗಿದೆ. “ಇದು ಸಂಪೂರ್ಣವಾಗಿ ಕ್ರಿಕೆಟ್ ಮತ್ತು ಕ್ರೀಡಾಭಿಮಾನಿಗಳ ಹಿತದೃಷ್ಟಿಯಿಂದ ಮಾಡಿರುವ ಪೂಜೆ. ಸ್ಟೇಡಿಯಂನಲ್ಲಿ ಎಲ್ಲ ಪಂದ್ಯಗಳು ಸುರಕ್ಷಿತವಾಗಿ, ಯಶಸ್ವಿಯಾಗಿ ನಡೆಯಲಿ ಎಂಬುದು ನಮ್ಮ ಆಶಯ” ಎಂದು ನೂತನ ಪದಾಧಿಕಾರಿಗಳು ಸ್ಪಷ್ಟಪಡಿಸಿದರು.
ಚಿನ್ನಸ್ವಾಮಿ ಸ್ಟೇಡಿಯಂಗೆ ಶಾಂತಿ, ಸುರಕ್ಷತೆ ಮತ್ತು ಉತ್ತಮ ವಾತಾವರಣ ದೊರೆಯಲಿ ಎಂಬ ಸಂಕಲ್ಪದೊಂದಿಗೆ ನಡೆದ ಈ ಹೋಮ–ಹವನಕ್ಕೆ ಕ್ರೀಡಾಭಿಮಾನಿಗಳು ಹಾಗೂ ಸಿಬ್ಬಂದಿಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

