ಮಳವಳ್ಳಿ, ಡಿ.16: ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣ ಸಂಪೂರ್ಣ ಸಜ್ಜಾಗಿದ್ದು, ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.
ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳವಳ್ಳಿಗೆ ಮೊದಲ ಬಾರಿಗೆ ರಾಷ್ಟ್ರಪತಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿ ಸ್ವಾಗತಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಮಂಗಳವಾರ ಮಧ್ಯಾಹ್ನ 3.15ಕ್ಕೆ ರಾಷ್ಟ್ರಪತಿ ಮುರ್ಮು ಅವರು ಜಯಂತ್ಯುತ್ಸವವನ್ನು ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ವಹಿಸುವರು.
ಜಯಂತ್ಯೋತ್ಸವದ ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಿಡುಗಡೆಗೊಳಿಸುವರು. ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಐದು ದಿನಗಳ ಕಾಲ ನಿರಂತರವಾಗಿ ನಾಟಕ ಪ್ರದರ್ಶನ, ಉಪನ್ಯಾಸ, ವಾದ್ಯಗೋಷ್ಠಿ, ಸಂಗೀತ ಸಂಜೆ, ವಚನ ನೃತ್ಯರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಿ.21ರಂದು ಸಮಾರೋಪಗೊಳ್ಳಲಿದೆ ಎಂದು ಹೇಳಿದರು.
ಇದೇ ವೇಳೆ ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ, ರಾಷ್ಟ್ರಪತಿ ಅವರ ಆಗಮನಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ. ಮಾರೇಹಳ್ಳಿ ಹೆಲಿಪ್ಯಾಡ್‌ನಲ್ಲಿ ಮೂರು ಹೆಲಿಕಾಪ್ಟರ್‌ಗಳಿಗೆ ಜಾಗ ಗುರುತಿಸಲಾಗಿದೆ. ಭದ್ರತಾ ವ್ಯವಸ್ಥೆಗಾಗಿ ಇಬ್ಬರು ಎಸ್‌ಪಿ, ನಾಲ್ವರು ಡಿವೈಎಸ್ಪಿ ಸೇರಿದಂತೆ 1000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

