ಬೆಂಗಳೂರು: ನೀನು ಭ್ರಷ್ಟಾಚಾರದ ಪಿತಾಮಹ, ನೀನು ಭ್ರಷ್ಟಾಚಾರಿ ಅಂತ ಇಡೀ ಲೋಕಕ್ಕೆ ಗೊತ್ತು. ಇದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ ಮಧ್ಯೆ ಸದನದಲ್ಲಿ ನಡೆದ ಪರಸ್ಪರ ವಾಕ್ಸಮರ.
ನಿಯಮ 69ರಡಿ ರಸಗೊಬ್ಬರ ಕೊರತೆ ವಿಚಾರವಾಗಿ ಚರ್ಚೆ ವೇಳೆ ಅಶ್ವತ್ಥ ನಾರಾಯಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪರಸ್ಪರ ವಾಗ್ದಾಳಿ ನಡೆಸಿದರು. ರಸಗೊಬ್ಬರ ಸಮಸ್ಯೆ ಇರುವುದಕ್ಕೆ ನಾವು ಮಾತನಾಡುತ್ತಿರುವುದು, ಸಚಿವರು ಉತ್ತರ ಕೊಡಲಿ ಎಂದು ಅಶ್ವತ್ಥ ನಾರಾಯಣ ಏರು ದನಿಯಲ್ಲಿ ಮಾತನಾಡಿದರು. ಈ ವೇಳೆ, ಗೋಲಿಬಾರ್ ಆಗಿದ್ದು ಯಾವ ಸರ್ಕಾರದಲ್ಲಿ ನಿಮ್ಮ ಸರ್ಕಾರದಲ್ಲಿ ಆಗಿದ್ದು ಎಂದು ಸಚಿವ ಚೆಲುವರಾಯಸ್ವಾಮಿ ತಿರುಗೇಟು ನೀಡಿದರು.
ಈ ವೇಳೆ ಅಶ್ವತ್ಥ ನಾರಾಯಣ, ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಉತ್ತರ ಕೊಡಲು ಧಮ್ ಇಲ್ಲದೆ ಓಡೋಗಿರುವವರು ನೀವು ಎಂದು ಸಚಿವ ಕೆ.ಜೆ.ಜಾರ್ಜ್ ಮೇಲೆ ಹರಿಹಾಯ್ದರು. ಇದಕ್ಕೆ ಸಚಿವ ಜಾರ್ಜ್, ಅಶ್ವತ್ಥ ನಾರಾಯಣ ಇಡೀ ಡಿಪಾರ್ಟ್ಮೆಂಟ್ ಲೂಟಿ ಹೊಡೆದವರು ನೀವು ಎಂದು ತಿರುಗೇಟು ನೀಡಿದರು. ಈ ವೇಳೆ ಕೊಲೆಗಡುಕ ಸರ್ಕಾರ, ಅಸಮರ್ಥರು, ಭ್ರಷ್ಟಾಚಾರ ಸರ್ಕಾರ ಎಂದು ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಪಿತಾಮಹ ನೀನು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್, ಅಶ್ವತ್ಥ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು. ಯಾರನ್ನು ಕೇಳಿದರು ಗೊತ್ತಾಗುತ್ತದೆ ಯಾರಪ್ಪ ಭ್ರಷ್ಟಾಚಾರದ ಪಿತಾಮಹ ಎಂದು ಅಶ್ವಥ್ಥ ನಾರಾಯಣ ತಿರುಗೇಟು ನೀಡಿದರು. ಇದಕ್ಕೆ ಡಿಕೆಶಿ, ರಾಮನಗರಕ್ಕೆ ಬಂದಿದ್ದಲ್ಲಪ್ಪ ಒಂದು ಸೀಟು ಬರಲಿಲ್ಲ ನಿನಗೆ. ಒಬ್ಬ ಮೈನಾರಿಟಿ ಸಚಿವರಿಗೆ ಅಸಮರ್ಥರು ಎಂದು ನೀನು ಹೇಳುತ್ತಿದ್ದೆಯಾ ಎಂದು ಕಿಡಿಕಾರಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ವಾಕ್ಸಮರ ನಡೆಯಿತು.

