ಬೆಂಗಳೂರು : ಕರ್ನಾಟಕ ಆರ್ಥಿಕ ಪ್ರಗತಿಯಲ್ಲಿ ದೇಶದಲ್ಲೇ ಉತ್ತಮ ಸಾಧನೆ ಮಾಡಿದ್ದು, 2023-24ನೇ ಹಣಕಾಸು ಸಾಲಿನಲ್ಲಿ ಶೇ.10.2ರಷ್ಟು ಜಿಎಸ್‌ಡಿಪಿ ಪ್ರಗತಿ ಸಾಧಿಸಿದೆ.2024-25ನೇ ಹಣಕಾಸು ಸಾಲಿಗೆ ಎನ್‌ಎಸ್ಸಿ ಕರ್ನಾಟಕ ರಾಜ್ಯಕ್ಕೆ ಶೇ.9.4 ಜಿಎಸ್‌ಡಿಪಿ ಪ್ರಗತಿಯನ್ನು ಅಂದಾಜಿಸಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ.10.5ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.
ಆದರೆ ಹಣಕಾಸು ಸಚಿವಾಲಯ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಗಮನದಲ್ಲಿಟ್ಟಿಕೊಂಡು ಈ ಅವಧಿಯಲ್ಲಿ ಕರ್ನಾಟಕದ ಜಿಎಸ್‌ಡಿಪಿ ದರವನ್ನು ಶೇ.14ರಷ್ಟು ಅಂದಾಜಿಸಲಾಗಿದೆ. 2024ರ ಸೆಪ್ಟಂಬರ್ ಅವಧಿಯಲ್ಲಿ ಕರ್ನಾಟಕ ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ.10ರಷ್ಟು ಹಾಗೂ ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಶೇ.24ರಷ್ಟು ಹೆಚ್ಚಳ ದಾಖಲಿಸಿದ್ದು, ಉತ್ತಮ ಆರ್ಥಿಕತೆಯನ್ನು ತೋರಿಸುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಈ ಅವಧಿಯಲ್ಲಿ ದೇಶದ ಸರಾಸರಿ ಜಿಎಸ್‌ಡಿಪಿ ಶೇ.8.2 ಆಗಿದೆ. ಕಳೆದ ಬಾರಿ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿದ್ದರೂ, ಜಾಗತಿಕವಾಗಿ ಐಟಿ ಮಾರುಕಟ್ಟೆ ಹಿನ್ನಡೆ ಅನುಭವಿಸಿದ್ದರೂ, ಕರ್ನಾಟಕ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದೆ ಎಂದಿದ್ದಾರೆ.
ಇದು ಗ್ಯಾರಂಟಿ ಯೋಜನೆಗಳು ಹಾಗೂ ಸರ್ಕಾರದ ಆರ್ಥಿಕ ನಿರ್ವಹಣೆಯ ಫಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕರ್ನಾಟಕದ ತಲಾ ಜಿಎಸ್‌ಡಿಪಿ ದೇಶದಲ್ಲೇ ಅತ್ಯಧಿಕವಾಗಿದೆ. ಗ್ಯಾರಂಟಿ ಸೇರಿದಂತೆ ರಾಜ್ಯ ಸರ್ಕಾರದ ಹಲವು ಜನಪರ ಯೋಜನೆಗಳು ಅಭಿವೃದ್ಧಿಯ ಫಲ ಎಲ್ಲಾ ವರ್ಗಗಳಿಗೂ ತಲುಪುವುದನ್ನು ಖಾತ್ರಿಪಡಿಸಿದೆ. ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯನ್ನು ಒಂದುಗೂಡಿಸುವ ಕರ್ನಾಟಕದ ಆರ್ಥಿಕ ಮಾದರಿಯ ಯಶಸ್ಸನ್ನು ಇದು ತೋರಿಸುತ್ತದೆ ಎಂದಿದ್ದಾರೆ.
ಐಟಿ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುವುದು ದೇಶದ ಡಿಜಿಟಲ್ ಮತ್ತು ಆರ್ಥಿಕ ರಂಗದಲ್ಲಿ ಪ್ರಮುಖ ಪಾತ್ರ ವಹಿಸಲು ಕಾರಣವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

