ಬೆಂಗಳೂರು : ಬಳ್ಳಾರಿ ಬಾಣಂತಿಯರ ಸಾವು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನನ್ನ ರಾಜೀನಾಮೆಯಿಂದ ಸರಿಯಾಗುತ್ತದೆ ಎಂಬುದೇ ಆದರೆ ಅದಕ್ಕೂ ಸಿದ್ಧ. ಇದರಲ್ಲಿ ನನ್ನ ಪ್ರತಿಷ್ಠೆ ಏನಿಲ್ಲ. ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲೂ ಸಿದ್ಧ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಇದು ಜೀವಕ್ಕೆ ಸಂಬಂಧಿಸಿದ ವಿಚಾರ. ಇಂಥ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕ್ರಮ ಆಗಲೇಬೇಕು ಈ ವಿಚಾರದಲ್ಲಿ ಪ್ರತಿಪಕ್ಷಗಳ ಸಹಕಾರವೂ ನಮಗೆ ಅಗತ್ಯ ಎಂದರು. ಬಿಜೆಪಿಯವರು ಖಂಡಿತವಾಗಿಯೂ ಲೋಕಾಯುಕ್ತಕ್ಕೆ ದೂರು ನೀಡಲಿ. ನನ್ನ ರಾಜೀನಾಮೆಯಿಂದ ಸರಿಯಾಗಲಿದೆ ಎಂದಾದರೆ ಅದಕ್ಕೂ ಸಿದ್ಧ. ಆದರೆ, ಈ ಪ್ರಕರಣದಲ್ಲಿ ಸರ್ಕಾರ ಗಂಭೀರವಾಗಿದೆ. ಇಂಥ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕ್ರಮ ಆಗಲೇಬೇಕು ಎಂದರು.
ಬಳ್ಳಾರಿಯಲ್ಲಿ 9 ಜನರಿಗೆ ಸಮಸ್ಯೆ ಆಗಿತ್ತು. ನಾಲ್ವರು ತೀರಿಕೊಂಡಿದ್ದಾರೆ. ಐದನೇಯವರು ಚಿಕಿತ್ಸೆ ಪಡೆಯುತ್ತಿದ್ದರು. ಅವರೂ ತೀರಿಕೊಂಡಿದ್ದಾರೆ. ಅದೇ ಬ್ಯಾಚ್ನ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕೊಡಲಾಗಿತ್ತು. ಈಗಾಗಲೇ ಕಂಪೆನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಮೃತರಿಗೆ ಬೇರೆ ಆರೋಗ್ಯ ಸಮಸ್ಯೆಯೂ ಇತ್ತು ಎನ್ನಲಾಗಿದೆ. ಆದರೆ, ಚೇತರಿಸಿಕೊಳ್ಳುತ್ತಿದ್ದರು ಎಂದು ವೈದ್ಯರು ಹೇಳಿದ್ದರು. ಆದರೆ ಗುರುವಾರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ವೈದ್ಯರು ತಿಳಿಸಿದ್ದರು ಎಂದು ಸಚಿವರು ಹೇಳಿದರು.
ಈ ವರ್ಷ ರಾಜ್ಯದಲ್ಲಿ ಈವರೆಗೆ 327 ಮೆಟರ್ನಲ್ ಸಾವಾಗಿದೆ. ಎಲ್ಲವನ್ನೂ ಪರಿಶೀಲಿಸಿ ಎಂದು ಸೂಚನೆ ನೀಡಿದ್ದೇವೆ. ಇಂಥ ಪ್ರಕರಣಗಳಲ್ಲಿ ಸಹನೆ ಇರಬಾರದು, ಕಠಿಣ ಕಾನೂನು ಕ್ರಮ ಆಗಬೇಕು. ಫಾರ್ಮಾಸ್ಯುಟಿಕಲ್ ಕಂಪನಿಗಳನ್ನು ರಕ್ಷಿಸುವ ಕಾನೂನುಗಳಾಗಿ ಹೋಗಿವೆ. ತಪ್ಪು ಮಾಡಿದರೆ ಶಿಕ್ಷೆ ಕೊಡುವಲ್ಲಿ ನಮ್ಮ ಕಾನೂನುಗಳು ವಿಫಲವಾಗಿವೆ ಎಂದು ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.