ಬೆಂಗಳೂರು : ಮಾಲಿವುಡ್‌ನಲ್ಲಿ ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಚಿತ್ರರಂಗ ಅಲ್ಲೋಲ ಕಲ್ಲೋಲ ಆಗಿದೆ. ಹೇಮಾ ಕಮಿಟಿಯಂತೆ ಮಹಿಳೆಯರ ಸುರಕ್ಷತೆಗಾಗಿ ಸ್ಯಾಂಡಲ್‌ವುಡ್‌ನಲ್ಲಿಯೂ ಫಿಲ್ಮ್ ಚೇಂಬರ್ ಸಭೆ ನಡೆದಿದೆ.
ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ, ಕೆಲಸ ನಿರ್ವಹಣೆಗೆ ಉತ್ತಮ ವಾತಾವರಣ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿಯನ್ನು ರಚಿಸಬೇಕು ಎಂದು ಫಿಲ್ ಇಂಡಸ್ಟ್ರಿ ಪಾರ್ಕ್ ರೈಟ್ಸ್ ಅಂಡ್ ಈಕ್ವಾಲಿಟಿ ಎಂಬ ಸಂಘಟನೆ ಬೇಡಿಕೆ ಮಂಡಿಸಿದೆ.
ಇದಕ್ಕೆ ಚಿತ್ರರಂಗದ ನಟಿ ರಮ್ಯ ಸೇರಿದಂತೆ ಹಲವು ನಟ, ನಟಿಯರು ಕೆಲವು ನಿರ್ದೇಶಕರು ಬೆಂಬಲ ವ್ಯಕ್ತಪಡಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಫೈರ್ ಸಮಿತಿಯ ನಿಯೋಗ ಭೇಟಿ ಮಾಡಿ ಸಮಿತಿ ರಚನೆಗೆ ಒತ್ತಾಯ ಮಾಡಿತು. ಅದರ ಬೆನ್ನಲ್ಲೇ ನಿರ್ಮಾಪಕರಾದ ಸಾ.ರಾ.ಗೋವಿಂದು, ಕೆ.ಮಂಜು ಸೇರಿದಂತೆ ಹಲವರು ಕರ್ನಾಟಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿ ಟೂ ಸೇರಿದಂತೆ ಯಾವುದೇ ಸಮಸ್ಯೆಗಳಿಲ್ಲ. ಹೀಗಾಗಿ ಇಲ್ಲಿ ಸಮಿತಿಯ ಅಗತ್ಯ ಇಲ್ಲ ಎಂದು ಪ್ರತಿಪಾದಿಸಿದರು.
ಈ ರೀತಿಯ ಅಭಿಪ್ರಾಯಕ್ಕೆ ತಮ ಸಹಮತ ಇದೆ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಎನ್.ಎಂ.ಸುರೇಶ್‌ಕುಮಾರ್ ಹೇಳಿದರು.ಆದರೆ ಚಿತ್ರರಂಗದಲ್ಲಿನ ಒಂದು ಬಣ ಸಮಿತಿ ರಚನೆ ಆಗಲೇಬೇಕು ಎಂದು ಪಟ್ಟು ಹಿಡಿದಿದೆ. ಹೀಗಾಗಿ ಚಿತ್ರರಂಗದ ಅಭಿಪ್ರಾಯ ಸಂಗ್ರಹಿಸಲಿ ಎಂದು ರಾಜ್ಯಸರ್ಕಾರದ ಅಂಗಸಂಸ್ಥೆ ಮಹಿಳಾ ಆಯೋಗ ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಇಂದು ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರ ಜೊತೆ ಸಮಾಲೋಚನೆಗೆ ಸಭೆ ಆಯೋಜಿಸಲಾಗಿತ್ತು.ಸಭೆಯಲ್ಲಿ ನಟಿ ತಾರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸಮಿತಿ ರಚನೆ ಬಗ್ಗೆ ಸಭೆಯಲ್ಲಿ ಪರ ವಿರೋಧಗಳ ಚರ್ಚೆಯಾಗಿವೆ. ಕೆಲವರು ಸಮಿತಿ ರಚನೆ ಆಗಬೇಕು ಎಂದು ಪ್ರತಿಪಾದಿಸಿದರೆ, ಇನ್ನು ಕೆಲವರು ಅದರ ಅಗತ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಅಂತಿಮವಾಗಿ ರಾಜ್ಯಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಅದಕ್ಕೆ ಬದ್ಧ ಎಂಬ ಅಭಿಪ್ರಾಯವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ವ್ಯಕ್ತಪಡಿಸಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಎಂ.ಸುರೇಶ್, ರಾಜ್ಯ ಮಹಿಳಾ ಆಯೋಗದ ಸೂಚನೆ ಮೇರೆಗೆ ಸಭೆ ಕರೆಯಲಾಗಿದ್ದು, ಚರ್ಚೆ ಮಾಡಿ ಅಭಿಪ್ರಾಯ ಕ್ರೂಢೀಕರಿಸಲಿದೆ. ಮಹಿಳಾ ಆಯೋಗದ ಮೂಲಕ ರಾಜ್ಯಸರ್ಕಾರಕ್ಕೆ ಸಭೆಯ ನಿರ್ಣಯಗಳನ್ನು ತಿಳಿಸಲಾಗುವುದು. ಸರ್ಕಾರ ಯಾವುದೇ ನಿರ್ಣಯ ಕೈಗೊಂಡರೂ ಅದಕ್ಕೆ ನಮ ಸಹಮತ ಇದೆ ಎಂದು ಹೇಳಿದರು.
ಸಭೆಯಲ್ಲಿ ಮಾತಿನ ಚಕಮಕಿ :
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಂದು ಚಿತ್ರರಂಗದ ಪ್ರಮುಖರು ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರ ಸಮುಖದಲ್ಲಿ ಸಭೆ ನಡೆಯಿತು.ಈ ವೇಳೆ ಸಮಿತಿ ರಚನೆಗೆ ತೀವ್ರ ವಿರೋಧ ವ್ಯಕ್ತವಾಯಿತು ಎಂದು ಹೇಳಲಾಗಿದೆ.
ಈ ವೇಳೆ ನಿರ್ಮಾಪಕರ ಸಂಘದ ಪ್ರತಿನಿಧಿಗಳು ಮತ್ತು ಮಹಿಳಾ ಆಯೋಗದ ಅಧ್ಯಕ್ಷರುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಎಷ್ಟೇ ಸಮಾಧಾನ ಮಾಡಿದರೂ ಪರಿಸ್ಥಿತಿ ತಿಳಿಗೊಳ್ಳದ ಹಿನ್ನೆಲೆಯಲ್ಲಿ ರಾಕ್‌ಲೈನ್ ವೆಂಕಟೇಶ್ ಸಭೆಯನ್ನು ಬಹಿಷ್ಕರಿಸಿ ಹೊರನಡೆಯುವುದಾಗಿ ಎಚ್ಚರಿಕೆ ನೀಡಿದರು ಎಂದು ತಿಳಿದುಬಂದಿದೆ.
ಸಭೆಯಲ್ಲಿ ಸಮಿತಿ ರಚನೆಯ ಪರವಾಗಿರುವವರು ಚಲನಚಿತ್ರರಂಗದಲ್ಲಿ ನಟಿಯರಿಗಾಗುತ್ತಿರುವ ಕಿರುಕುಳಕ್ಕೆ ಸೀಮಿತವಾಗಿ ಸಮಿತಿ ರಚನೆ ಮಾಡುವುದಲ್ಲ, ಮಹಿಳೆಯರ ಸುರಕ್ಷತೆಯ ವಾತಾವರಣ ನಿರ್ಮಿಸಲು ಇಂತಹ ಸಮಿತಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಯಾರಿಗೆ, ಯಾವ ರೀತಿಯ ಕಿರುಕುಳವಾಗಿದೆ ಎಂದು ಬಹಿರಂಗವಾಗಿ ಹೇಳಿದರೆ ಕ್ರಮ ಕೈಗೊಳ್ಳುವುದಾಗಿ ವಾಣಿಜ್ಯ ಮಂಡಳಿಯ ಮುಖಂಡರು ತಿರುಗೇಟು ನೀಡಿದ್ದಾರೆ. ಚಿತ್ರರಂಗದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಗಲಕ್ಷ್ಮಿ ಅಸಮಾಧಾನದಿಂದಲೇ ಸಭೆ ಮುಗಿಸಿದ್ದಾರೆ.
ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ, ನಟಿಯರಾದ ತಾರಾ, ಪ್ರಮೀಳಾ ಜೋಶಾಯ್, ಅಶ್ವಿನಿ, ರೂಪಾ ಅಯ್ಯರ್, ನೀತು, ಸಂಜನಾ ಗರ್ಲಾನಿ, ಭಾವನಾ ರಾಮಯ್ಯ, ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕರ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದೇ ವೇಳೆ ಮಾತನಾಡಿದ ನಾಗಲಕ್ಷ್ಮಿ, ಚಿತ್ರರಂಗದಲ್ಲಿ ನಟಿಯರು ತಮ ಮೇಲಾಗುತ್ತಿರುವ ದೌರ್ಜನ್ಯ, ಕಿರುಕುಳದ ಬಗ್ಗೆ ಬಹಿರಂಗವಾಗಿ ಹೇಳುವ ವಾತಾವರಣ ಇಲ್ಲ. ಒಂದು ವೇಳೆ ಆ ರೀತಿ ಹೇಳಿದರೆ ಚಿತ್ರರಂಗದಲ್ಲಿ ಅವಕಾಶಗಳೇ ತಪ್ಪಿಹೋಗುತ್ತವೆ. ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ವಾಣಿಜ್ಯ ಮಂಡಳಿಯವರು ಹೇಳುತ್ತಿದ್ದಾರೆ.
ಆದರೆ ಆ ರೀತಿ ಮಾಹಿತಿ ನೀಡಲು ಯಾರೂ ಮುಂದೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗ ಚಿತ್ರರಂಗದಲ್ಲಿ ನಟಿಯರು , ಮಹಿಳಾ ತಂತ್ರಜ್ಞರು ಹಾಗೂ ಸಿಬ್ಬಂದಿಗಳಿಂದ ರಹಸ್ಯವಾಗಿ ಅಭಿಪ್ರಾಯ ಸಂಗ್ರಹಿಸಲಿದೆ. ನಂತರ ಇದರ ಕುರಿತು ಅಧ್ಯಯನ ನಡೆಸಲು ಹೇಮಾ ಸಮಿತಿ ಮಾದರಿಯಲ್ಲಿ ರಾಜ್ಯದಲ್ಲೂ ಸಮಿತಿ ರಚನೆ ಮಾಡಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗುವುದು ಎಂದರು.
ಕೆಲಸ ಮಾಡುವ ಜಾಗದಲ್ಲಿ ಕೆಲವು ಕಡೆ ಶೌಚಾಲಯಗಳಿರುವುದಿಲ್ಲ. ಅಂತಹ ವೇಳೆ ಮಹಿಳೆಯರಿಗೆ ನೀರು ಕುಡಿಯಬೇಡಿ ಎಂದು ಹೇಳುತ್ತಿರುವ ಪ್ರಕರಣಗಳಿವೆ. ಮಹಿಳೆಯರಿಗೆ ಸಂಬಂಧಪಟ್ಟಂತೆ ಸೂಕ್ಷ್ಮವಾದ ವಿಚಾರಗಳಿಗೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಕೆಲವು ವಿಷಯಗಳಲ್ಲಿ ನಟಿಸುವಾಗ ಮುಜುಗರ ಆಗುವುದು ಸಹಜ. ಅಂತಹ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆಯನ್ನು ಚಿತ್ರರಂಗದಲ್ಲಿ ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ಕಾನೂನಿನ ಮಾಹಿತಿಯೂ ಮಹಿಳಾ ನಟಿಯರಿಗಿಲ್ಲ ಎಂದು ನಾಗಲಕ್ಷ್ಮಿ ಹೇಳಿದರು.
ಮಹಿಳೆಯರಿಗೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ ಸುರಕ್ಷಿತ ವಾತಾವರಣ ನಿರ್ಮಿಸಲು ರಹಸ್ಯವಾದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.

