ಬೆಂಗಳೂರು : ಸಂಸದ ಡಾ.ಕೆ ಸುಧಾಕರ್ ವಿರುದ್ದ ಯಲಹಂಕದ ಶಾಸಕ ಎಸ್.ಆರ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದು. ಸುಧಾಕರ್ಗೆ ಬಿಜೆಪಿ ಪಕ್ಷದಲ್ಲಿ ಇರಲು ಇಷ್ಟವಾಗದೆ ಇದ್ದರೆ, ಪಕ್ಷ ಬಿಟ್ಟು ಹೋಗಲಿ ಎಂದು ಹೇಳಿದರು.
ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಎಸ್.ಆರ್ ವಿಶ್ವನಾಥ್ ‘ಸುಧಾಕರ್ ಮಾತನಾಡಿರೋದು ನನಗೆ, ನಮ್ಮ ಕಾರ್ಯಕರ್ತರಿಗೆ ಹಿಡಿಸಲಿಲ್ಲ. ಅವರು ನಮ್ಮ ಕ್ಷೇತ್ರದ ವಿಚಾರವಾಗಿಯೂ ಹೇಳಿಕೆ ನೀಡಿದಾರೆ. ಸುಧಾಕರ್ ಅವರು ನನ್ನಿಂದಲೇ ಸರ್ಕಾರ ರಚನೆ ಆಯ್ತು ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿಗೆ ಮೆಜಾರಿಟಿ ಬಂದ ನಂತರ ಕೊನೆಯಲ್ಲಿ ಬಂದ ಶಾಸಕ ಸುಧಾಕರ್. ಆದರೆ ಅವರಿಗೆ ಎರಡು ಸಚಿವ ಸ್ಥಾನ ನೀಡಿದೆವು. ಆದರೂ ಅವರು ವಿಧಾನ ಸಭೆ ಚುನಾವಣೆಯಲ್ಲಿ ಸೋತರು.
ಇನ್ನು ಲೋಕಸಭೆ ಚುನಾವಣೆಯಲ್ಲಿ ನನಗೂ ಸಣ್ಣ ಪುಟ್ಟ ಅಸಮಾಧಾನ ಇದೆ, ಆದರೆ ನಾನು ಯಾವತ್ತೂ ಬಹಿರಂಗ ಹೇಳಿಕೆ ನೀಡಲಿಲ್ಲ. ಲೋಕಸಭೆ ಚುನಾವಣೆಗೆ ಕೊನೆಯಲ್ಲಿ ಬಂದ್ರಿ. ಲೋಕಸಭಾ ಸ್ಥಾನ ಸಿಗಲ್ಲ ಎಂದು ಕಾಂಗ್ರೆಸ್ನವರ ಜೊತೆ ಮಾತನಾಡಿಲ್ಲ ಎಂದು ಆಣೆ ಪ್ರಮಾಣ ಮಾಡಿ, ನಾನು ಮಾಡುತ್ತೇನೆ. ನಂತರ ಲೋಕಸಭೆಗೆ ಟಿಕೆಟ್ ಪಡೆದು ಮೋದಿ ಅಲೆಯಲ್ಲಿ ಗೆದ್ದು ಬಂದಿದ್ದೀರ.
ಸುಧಾಕರ್ ಮೇಲೆ ವಾಗ್ದಾಳಿ ಮುಂದುವರಿಸಿದ ಶಾಸಕ ಎಸ್.ಆರ್ ವಿಶ್ವನಾಥ್ ‘ಸುಧಾಕರ್ ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಪಕ್ಷದಲ್ಲಿ ಒಂದು ಶಾಪ ಇದೆ. ಈ ಪಕ್ಷವನ್ನು ಬಿಟ್ಟು ಹೋದವರು ಉದ್ದಾರ ಆಗಿರುವುದು ಕಡಿಮೆ ಇದು ಸುಧಾಕರ್ಗೂ ಅನ್ವಯವಾಗುತ್ತದೆ. ಏನೇ ಆದರೂ ಪಕ್ಷದ ಚೌಕಟ್ಟಿನಲ್ಲಿರಿ, ಏನೇ ಆದರೂ ವರಿಷ್ಟರ ಜೊತೆ ಮಾತಾಡಿ. ಇಲ್ಲ ಅಂದ್ರೆ ಪಕ್ಷ ಬಿಟ್ಟು ಹೋಗಿ, ನಿಮ್ಮಂತವರೂ ಇಲ್ಲೀರೊ ಬದಲು, ಹೋದರೇನೆ ಸರಿ ಎಂದು ವಿಶ್ವನಾಥ್ ಹೇಳಿಕೆ ನೀಡಿದರು.

