ದೆಹಲಿ : ದಲೈ ಲಾಮಾ ಅವರ ಮುಂದಿನ ಉತ್ತರಾಧಿಕಾರಿಯನ್ನು ಬೀಜಿಂಗ್ ಅನುಮೋದಿಸಬೇಕು ಎಂಬ ಚೀನಾದ ಪ್ರತಿಪಾದನೆಗೆ ಭಾರತ ಇಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಟಿಬೆಟಿಯನ್ ಆಧ್ಯಾತ್ಮಿಕ ನಾಯಕರಾದ ದಲೈ ಲಾಮಾ ಮಾತ್ರ ಅವರ ಉತ್ತರಾಧಿಕಾರಿಯನ್ನು ನಿರ್ಧರಿಸುವ ಅಧಿಕಾರ ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನೀಡಿರುವ ಹೇಳಿಕೆಯಲ್ಲಿ, “ದಲೈ ಲಾಮಾ ಅವರ ಸ್ಥಾನವು ಟಿಬೆಟಿಯನ್ನರಿಗೆ ಮಾತ್ರವಲ್ಲ, ಪ್ರಪಂಚದಾದ್ಯಂತದ ಅವರ ಎಲ್ಲಾ ಅನುಯಾಯಿಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಅವರ ಉತ್ತರಾಧಿಕಾರಿಯನ್ನು ನಿರ್ಧರಿಸುವ ಹಕ್ಕು ದಲೈ ಲಾಮಾ ಅವರ ಮೇಲಿದೆ. ಆ ಅಧಿಕಾರ ಬೇರಾರಿಗೂ ಇಲ್ಲ” ಎಂದು ಚೀನಾಗೆ ಚಾಟಿ ಬೀಸಿದ್ದಾರೆ.
ದಲೈ ಲಾಮಾ ಅವರ 90ನೇ ಹುಟ್ಟುಹಬ್ಬದ ಕಾರ್ಯಕ್ರಮಗಳಿಗೆ ಹಾಜರಾಗಲು ಭಾರತ ಸರಕಾರದ ಪ್ರತಿನಿಧಿಗಳಾಗಿ ರಿಜಿಜು ಮತ್ತು ಜನತಾದಳ (ಯುನೈಟೆಡ್) ನಾಯಕ ಲಲ್ಲನ್ ಸಿಂಗ್ ಧರ್ಮಶಾಲಾಗೆ ಭೇಟಿ ನೀಡುತ್ತಿದ್ದಾರೆ. “ಇದು ಸಂಪೂರ್ಣವಾಗಿ ಧಾರ್ಮಿಕ ಸಂದರ್ಭ” ಎಂದು ರಿಜಿಜು ಹೇಳಿದ್ದಾರೆ.
ದಲೈ ಲಾಮಾ ಅವರ 600 ವರ್ಷಗಳಷ್ಟು ಹಳೆಯದಾದ ಸಂಸ್ಥೆಯು ತಮ್ಮ ಜೀವಿತಾವಧಿಯ ನಂತರವೂ ಮುಂದುವರಿಯುತ್ತದೆ. 15ನೇ ದಲೈ ಲಾಮಾ ಅವರ ಆಯ್ಕೆಯು ಸಂಪೂರ್ಣವಾಗಿ ದಲೈ ಲಾಮಾ ಅವರ ಅಧಿಕೃತ ಕಚೇರಿಯಾದ ಗಾಡೆನ್ ಫೋಡ್ರಾಂಗ್ ಟ್ರಸ್ಟ್‌ನ ಮೇಲಿರುತ್ತದೆ ಎಂದು ಚೀನಾದಿಂದ ಗಡೀಪಾರು ಮಾಡಲಾದ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಪುನರುಚ್ಚರಿಸಿದ ನಂತರ ಕೇಂದ್ರ ಸಚಿವರ ಈ ಹೇಳಿಕೆಗಳು ಬಂದಿವೆ.
1959ರಲ್ಲಿ ಚೀನಾದ ಆಳ್ವಿಕೆಯ ವಿರುದ್ಧ ವಿಫಲವಾದ ದಂಗೆಯ ನಂತರ ಪಲಾಯನ ಮಾಡಿದ ದಲೈ ಲಾಮಾ ಭಾರತದಲ್ಲಿ ವಾಸ್ತವ್ಯ ಹೂಡಿದ್ದಾರೆ. ಬೀಜಿಂಗ್ ಅವರನ್ನು ಚೀನಾದಿಂದ ಟಿಬೆಟ್ ಅನ್ನು ವಿಭಜಿಸುವ ಪ್ರತ್ಯೇಕತಾವಾದಿ ಎಂದು ಹಣೆಪಟ್ಟಿ ಕಟ್ಟುತ್ತಲೇ ಇದ್ದರೂ, ದಲೈ ಲಾಮಾ ಅವರನ್ನು ವಿಶ್ವಾದ್ಯಂತ ಅಹಿಂಸೆ, ಕರುಣೆ ಮತ್ತು ಟಿಬೆಟಿಯನ್ ಜನರು ತಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಗುರುತನ್ನು ರಕ್ಷಿಸುವ ಹೋರಾಟದ ಸಂಕೇತವಾಗಿ ನೋಡಲಾಗುತ್ತದೆ.

