ನವದೆಹಲಿ: ಜಗತ್ತಿನಲ್ಲಿ ಅತ್ಯಂತ ಹೆಚ್ಚು ಉತ್ಪಾದನೆ ಕಂಡ ಸೂಪರ್‌ಸಾನಿಕ್ ಯುದ್ಧ ವಿಮಾನ ಮಿಗ್-21 (MiG-21 Retires) ತನ್ನ 6 ದಶಕಗಳ ಸೇವೆಗೆ ಇಂದು ವಿದಾಯ ಹೇಳಿದೆ. ಚಂಡೀಗಢದ ವಾಯುನೆಲೆಯಲ್ಲಿಂದು ತನ್ನ ಕೊನೆಯ ಹಾರಾಟ ನಡೆಸಿದ ರಷ್ಯಾ ಮೂಲದ ಪ್ರಸಿದ್ಧ ಮಿಗ್-21 ಯುದ್ಧ ವಿಮಾನಕ್ಕೆ ಭಾರತೀಯ ವಾಯುಪಡೆ (IAF) ಗುಡ್‌ಬೈ ಹೇಳಿದೆ.
ನೋಡಲು ಸಣ್ಣದಾದರೂ ಅತ್ಯಂತ ವೇಗವಾದ, ಬಹುಮುಖಿ ಯುದ್ಧ ವಿಮಾನ ಇದಾಗಿತ್ತು. ಶತ್ರುಗಳ ವಿಮಾನಗಳನ್ನು ತಡೆಯಲು, ಭೂಮಿಯಲ್ಲಿನ ಗುರಿಗಳ ಮೇಲೆ ದಾಳಿ ನಡೆಸಲು ಮತ್ತು ಗುಪ್ತಚರ ಮಾಹಿತಿಗಳನ್ನು ಕಲೆಹಾಕಲು ಸೂಕ್ತವಾದ ಯುದ್ಧ ವಿಮಾನವಾಗಿತ್ತು ಅನ್ನೋದು ತಜ್ಞರ ವಿಶ್ಲೇಷಣೆ.
ಆದ್ರೆ ಇತ್ತೀಚಿನ ವರ್ಷಗಳಲ್ಲಿ ʻಹಾರುವ ಶವಪೆಟ್ಟಿಗೆʼ ಎಂದೇ ಕುಖ್ಯಾತಿ ಪಡೆದುಕೊಂಡಿತ್ತು. ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರ ಸಮ್ಮುಖದಲ್ಲಿ ಭಾರತೀಯ ವಾಯುಪಡೆ ವಿದಾಯ ಸಲ್ಲಿಸಿತು.
ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ವರಿಷ್ಠ ಜನರಲ್ ಉಪೇಂದ್ರ ದ್ವಿವೇದಿ, ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್ ಹಾಗೂ ನೌಕಾ ಪಡೆಯ ವರಿಷ್ಠ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಈ ವಿದಾಯ ಸಮಾರಂಭಕ್ಕೆ ಸಾಕ್ಷಿಯಾದರು.
ಮಿಗ್-21 ಕೇವಲ ಯುದ್ಧ ವಿಮಾನವಲ್ಲ, ಭಾರತ-ರಷ್ಯಾದ ಆಳವಾದ ಸಂಬಂಧಕ್ಕೆ ಸಾಕ್ಷಿ
ಮಿಗ್-21 ಕೇವಲ ಯುದ್ಧ ವಿಮಾನವಲ್ಲ, ಬದಲಾಗಿ ಭಾರತ ಹಾಗೂ ರಷ್ಯಾ ನಡುವಿನ ಆಳವಾದ ಸಂಬಂಧಕ್ಕೆ ಇದು ಉಜ್ವಲ ಉದಾಹರಣೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಯುದ್ಧ ವಿಮಾನವು ರಕ್ಷಣಾ ಗುರಾಣಿ, ದೇಶದ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ.ಮಿಗ್ -21 ಹಲವಾರು ದೇಶದ ವೀರರ ವೀರ ಕಾರ್ಯಗಳಿಗೆ ಸಾಕ್ಷಿಯಾಗಿದೆ. ಇದರ ಕೊಡುಗೆ ಒಂದೇ ಒಂದು ಘಟನೆ ಅಥವಾ ಒಂದೇ ಯುದ್ಧಕ್ಕೆ ಸೀಮಿತವಾಗಿಲ್ಲ. ಇಂದು ಮಿಗ್-21 ಯುದ್ಧ ವಿಮಾನ ನಿವೃತ್ತಿಗೊಳ್ಳುತ್ತಿದ್ದು ಕೊನೆಯ ಹಾರಾಟ ನಡೆಸಿದೆ.

